ಕುವೈತ್ ಅಗ್ನಿ ದುರಂತದಲ್ಲಿ ಐವರು ತಮಿಳರ ಮೃತ್ಯು : ತಮಿಳುನಾಡು ಸಚಿವ ಮಸ್ತಾನ್
Photo: PTI
ಚೆನ್ನೈ: ಕುವೈತ್ ಅಗ್ನಿ ದುರಂತದಲ್ಲಿ ಐವರು ತಮಿಳರು ಮೃತಪಟ್ಟಿದ್ದಾರೆ ಎಂಬ ಸಂಗತಿ ತಿಳಿದು ಬಂದಿದೆ ಎಂದು ವಿದೇಶಗಳಲ್ಲಿನ ತಮಿಳು ಸಂಘಟನೆಗಳು ಹಂಚಿಕೊಂಡಿರುವ ಮಾಹಿತಿಯನ್ನು ಉಲ್ಲೇಖಿಸಿ ಗುರುವಾರ ತಮಿಳುನಾಡು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಅನಿವಾಸಿ ತಮಿಳರ ಕಲ್ಯಾಣ ಸಚಿವ ಕೆ.ಎಸ್.ಮಸ್ತಾನ್ ಹೇಳಿದ್ದಾರೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಸ್ತಾನ್, ಮೃತರು ತಂಜಾವೂರು, ರಾಮನಾಥಪುರಂ ಹಾಗೂ ಪೆರವುರಾಣಿ ಪ್ರಾಂತ್ಯಗಳಿಗೆ ಸೇರಿದ್ದು, ಅವರನ್ನು ರಾಮ ಕರುಪ್ಪನ್, ವೀರಸ್ವಾಮಿ ಮಾರಿಯಪ್ಪನ್, ಚಿನ್ನದುರೈ ಕೃಷ್ಣಮೂರ್ತಿ, ಮುಹಮ್ಮದ್ ಶರೀಫ್ ಹಾಗೂ ರಿಚರ್ಡ್ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ನಿರ್ದೇಶನದ ಮೇರೆಗೆ ಮೃತರ ದೇಹಗಳನ್ನು ರಾಜ್ಯಕ್ಕೆ ಮರಳಿ ತರಲು ಹಾಗೂ ಗಾಯಾಳುಗಳ ಚಿಕಿತ್ಸೆಯನ್ನು ಖಾತರಿಪಡಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬುಧವಾರ ಬೆಳಗ್ಗೆ ಕುವೈತ್ ನ ಮಂಗಫ್ ನಗರದಲ್ಲಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ 40 ಮಂದಿ ಭಾರತೀಯರಾಗಿದ್ದಾರೆ.