ವಿಮಾನಯಾನ ವಿಳಂಬ; ಪ್ರಯಾಣಿಕರ ಪರದಾಟ
ಇಂಡಿಗೋ, ಮುಂಬೈ ವಿಮಾನನಿಲ್ದಾಣಕ್ಕೆ ಕೇಂದ್ರದ ಶೋಕಾಸ್ ನೋಟಿಸ್
Photo: Twitter
ಹೊಸದಿಲ್ಲಿ: ವಿಮಾನಹಾರಾಟ ವಿಳಂಬದಿಂದಾಗಿ ಸಂಕಷ್ಟಕ್ಕೀಡಾದ ವಿಮಾನ ಪ್ರಯಾಣಿಕರು ರನ್ವೇನಲ್ಲಿಯೇ ಕುಳಿತುಕೊಂಡು ಆಹಾರವನ್ನು ಸೇವಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕೇಂದ್ರ ನಾಗರಿಕ ಸಚಿವಾಲಯವು ಇಂಡಿಗೋ ಹಾಗೂ ಮುಂಬೈ ವಿಮಾನ ನಿಲ್ದಾಣಕ್ಕೆ ಮಂಗಳವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಒಂದೇ ದಿನದಲ್ಲಿ ಉತ್ತರಿಸುವಂತೆ ಗಡುವು ವಿಧಿಸಿದೆ.
ಒಂದು ವೇಳೆ ನಿಗದಿತ ಸಮಯದಲ್ಲಿ ಉತ್ತರಗಳು ದೊರೆಯದೇ ಇದ್ದಲ್ಲಿ ಆರ್ಥಿಕ ದಂಡ ಸೇರಿದಂತೆ ಕಾನೂನುಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅದು ಹೇಳಿದೆ.
ವಿಮಾನಹಾರಾಟಗಳ ವಿಳಂಬದಿಂದಾಗಿ ಪ್ರಯಾಣಿಕರು ಅನುಭವಿಸಿದ ಬವಣೆಗಳು ವ್ಯಾಪಕವಾಗಿ ಚರ್ಚೆಯಾದ ಬೆನ್ನಲ್ಲೇ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೋಮವಾರ ತಡರಾತ್ರಿ ತನ್ನ ಸಚಿವಾಲಯದ ಎಲ್ಲಾ ಅಧಿಕಾರಿಗಳ ಜೊತೆ ಸಬೆ ನಡೆಸಿದ್ದರು. ಈ ಘಟನೆಗೆ ಮುಂಬೈ ವಿಮಾನನಿಲ್ದಾಣ ಹಾಗೂ ಇಂಡಿಗೊ ಹೊಣೆಯೆಂದು ಸಚಿವಾಲಯ ತಿಳಿಸಿತ್ತು . ವಿಮಾನಹಾರಾಟದ ವಿಳಂಬದಿಂದಾಗಿ ಉಂಟಾಗುವ ಪರಿಸ್ಥಿಯನ್ನು ಎದುರಿಸಲು ಸನ್ನದ್ಧವಾಗದಿರುವುದು ಹಾಗೂ ವಿಮಾನನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ತೆಗಳನ್ನು ಮಾಡಲಾಗಿಲ್ಲವೆಂದು ಸಚಿವಾಲಯವು ಅಸಮಾಧಾನ ವ್ಯಕ್ತಪಡಿಸಿದೆ.
ಘಟನೆಯ ಬಗ್ಗೆ ತನಗೆ ವರದಿ ಮಾಡದೇ ಇದ್ದುದಕ್ಕಾಗಿಯೂ ಮುಂಬೈ ವಿಮಾನನಿಲ್ದಾಣವನ್ನು ಸಚಿವಾಲಯ ತರಾಟೆಗೆ ತೆಗೆದುಕೊಳ್ಳಲಾಗಿದೆ. ಮುಂಬೈನ ವಿಮಾನನಿಲ್ದಾಣ ಭದ್ರತಾ ಸಮಿತಿ (ಎಎಸ್ಜಿ)ಗೂ ಕೂಡಾ ಈ ಪರಿಸ್ಥಿತಿಯ ಕುರಿತು ಮುನ್ನೆಚ್ಚರಿಕೆ ನೀಡಲಾಗಿಲ್ಲವೆಂದು’ ಎಂದು ನೋಟಿಸ್ನಲ್ಲಿ ಅಸಮಾದಾನ ವ್ಯಕ್ತಡಿಸಲಾಗಿದೆ.
ದಟ್ಟ ಮಂಜಿನ ಕಾರಣದಿಂದಾಗಿ ಗೋವಾ-ದಿಲ್ಲಿ ವಿಮಾನವನ್ನು ಸೋಮವಾರ ಮುಂಬೈ ವಿಮಾನನಿಲ್ದಾಣದಲ್ಲಿ ಇಳಿಸಲಾಗಿತ್ತು. ಸುಮಾರು 17 ತಾಸುಗಳ ಕಾಲ ವಿಮಾನದಲ್ಲೇ ಪ್ರಯಾಣಿಕರು ಉಳಿದುಕೊಳ್ಳಬೇಕಾಯಿತು. ಈ ಸಂದರ್ಭ ಪ್ರಯಾಣಿಕರು ವಿಮಾನನಿಲಾಣ್ದದ ರನ್ವೇನಲ್ಲಿ ಕುಳಿತು ಆಹಾರವನ್ನು ಸೇವಿಸುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.