ಪಂಜಾಬ್, ಉತ್ತರ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಲ್ಬಣ; ಮೃತರ ಸಂಖ್ಯೆ 91ಕ್ಕೆ ಏರಿಕೆ
ಫೋಟೋ: ಟೈಮ್ಸ್ ಆಫ್ ಇಂಡಿಯಾ
ಹೊಸದಿಲ್ಲಿ: ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿರುವ ಬಗ್ಗೆ ವರದಿಯಾಗಿದೆ. ಪ್ರವಾಹ ಪೀಡಿತ ಪಂಜಾಬ್ನ ಫಝಿಕಾದಲ್ಲಿ ಸಟ್ಲೇಜ್ ನದಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ. ಉತ್ತರ ಪ್ರದೇಶದ ಆಗ್ರಾ ಹಾಗೂ ಪ್ರಯಾಗ್ರಾಜ್ ನಲ್ಲಿ ಗಂಗಾ ಹಾಗೂ ಯಮುನಾ ನದಿ ನೀರಿನ ಮಟ್ಟ ಏರುತ್ತಿದ್ದು, ಪ್ರವಾಹ ಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಉತ್ತರಾಖಂಡದಲ್ಲಿ ಮುಂಗಾರು ಹಾಗೂ ಪಶ್ಚಿಮ ಪ್ರಕ್ಷುಬ್ಧತೆಯ ಪರಿಣಾಮವಾಗಿ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂಕುಸಿತ ಹಾಗೂ ಬಂಡೆಗಳು ಉರುಳುವ ದೃಶ್ಯ ಸಾಮಾನ್ಯವಾಗಿದ್ದು, ಮಧ್ಯಪ್ರದೇಶದಿಂದ ಆಗಮಿಸಿದ್ದ ಮೂರು ಮಂದಿ ಗಂಗೋತ್ರಿ ಯಾತ್ರಿಕರು ಸೇರಿದಂತೆ ಎಂಟು ಮಂದಿ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾಗಿದ್ದಾರೆ.
ಮಂಗಳವಾರ ಉತ್ತರ ಭಾರತದಲ್ಲಿ ಮಳೆ ಸಂಬಂಧಿ ಅನಾಹುತಗಳಲ್ಲಿ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 91ಕ್ಕೇರಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶೀರ, ಹರ್ಯಾಣ, ಪಂಜಾಬ್, ರಾಜಸ್ಥಾನಗಳಲ್ಲಿ ಮಳೆ ಸ್ವಲ್ಪ ಬಿಡುವು ನೀಡಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಗಂಗೋತ್ರಿ ಯಾತ್ರಿಗಳು ಪ್ರಯಾಣಿಸುತ್ತಿದ್ದ ಮಿನಿಬಸ್ನ ಮೇಲೆ ದಿಢೀರನೇ ಕುಸಿದ ಪರ್ವತದ ಕಲ್ಲುಬಂಡೆಗಳು ಹಾಗೂ ಮಣ್ಣು ಬಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ಗಂಗೋತ್ರಿ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಮೂವರು ಗಾಯಾಳುಗಳನ್ನು ಎಐಐಎಂಎಸ್ಗೆ ದಾಖಲಿಸಲಾಗಿದೆ.
ಇಂಥದ್ದೇ ಮತ್ತೊಂದು ದುರಂತದಲ್ಲಿ ರುದ್ರಪ್ರಯಾಗ್ನಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಡೆಹ್ರಾಡೂನ್ನ ಹೊರವಲಯದ ಕಲ್ಸಿಯಲ್ಲಿ ದೊಡ್ಡ ಬಂಡೆಯೊಂದು ಕೋಟಿ ರಸ್ತೆಯಲ್ಲಿ ವಾಹನದ ಮೇಲೆ ಉರುಳಿ ಬಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟರು.
ಉತ್ತರಾಖಂಡದಲ್ಲಿ ಬುಧವಾರವೂ ವ್ಯಾಪಕ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಹಾನಿಗೀಡಾಗಿರುವ ಹಿಮಾಚಲ ಪ್ರದೇಶದಲ್ಲಿ ಮತ್ತೆ ಆರು ಮಂದಿ ಮೃತಪಟ್ಟಿದ್ದಾರೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳ ಮೂಲಕ ಸುಮಾರು 300 ಮಂದಿಯನ್ನು ರಕ್ಷಿಸಲಾಗಿದೆ ೆಮದು ತಿಳಿದು ಬಂದಿದೆ.