ಉಪಹಾರ ವಿತರಕ, ಕೂಲಿ ಕಾರ್ಮಿಕ ಇಂದು ಮಧ್ಯಪ್ರದೇಶ ಶಾಸಕ!
ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರಲ್ಲಿ ಅತ್ಯಂತ ಶ್ರೀಮಂತ ಎನಿಸಿದ ಶಾಸಕರು ತಮ್ಮ ಆಸ್ತಿ 223 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ.
ಮತ್ತೊಂದು ಭಾಗದಲ್ಲಿ ಕೂಲಿಕಾರ್ಮಿಕನಾಗಿ, ಉಪಹಾರ ವಿತರಕರಾಗಿ ಅರೆಕಾಲಿಕ ಉದ್ಯೋಗ ಮಾಡಿಕೊಂಡು ಶಿಕ್ಷಣ ಮುಂದುವರಿಸಿದ್ದ ಶಾಸಕ ಕಮಲೇಶ್ವರ್ ದೋಡಿಯಾರ್ ಇಂದಿಗೂ ಸೂರು ಸೋರುವ ಮಣ್ಣಿನ ಮನೆಯಲ್ಲಿ ವಾಸವಿದ್ದಾರೆ.
ಎಲ್ಲ ಪ್ರತಿಕೂಲಗಳನ್ನು ಎದುರಿಸಿ ವಿಧಾನಸಭೆಯ ಮೆಟ್ಟಲು ಏರಿರುವ ರತ್ಲಂ ಜಿಲ್ಲೆಯ ಸೈಲಾನಾ ಕ್ಷೇತ್ರದ ನೂತನ ಶಾಸಕ, ಆಸ್ತಿಯ ವಿವರಗಳನ್ನು ವಿಧಾನಸಭೆ ಕಾರ್ಯಾಲಯಕ್ಕೆ ತಲುಪಿಸಲು 300 ಕಿಲೋಮೀಟರ್ ದೂರವನ್ನು ಬೈಕ್ನಲ್ಲೇ ಕ್ರಮಿಸಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಹುಟ್ಟಿಕೊಂಡ ಭಾರತ ಆದಿವಾಸಿ ಪಕ್ಷದ ಟಿಕೆಟ್ ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ 33 ವರ್ಷದ ಇವರು, ತಮ್ಮ ನಿಕಟಸ್ಪರ್ಧಿ ಕಾಂಗ್ರೆಸ್ನ ಹರ್ಷ ವಿಜಯ್ ಗೆಹ್ಲೋಟ್ ಅವರನ್ನು 4618 ಮತಗಳಿಂದ ಸೋಲಿಸಿದರು. 230 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿ ಕನಿಷ್ಠ ಒಂದು ಸ್ಥಾನವನ್ನಾದರೂ ಗೆಲ್ಲಲು ಸಾಧ್ಯವಾದದ್ದು ಈ ಪಕ್ಷಕ್ಕೆ ಮಾತ್ರ ಎನ್ನುವುದು ಗಮನಾರ್ಹ.
"ಪಕ್ಷದ ಸಹೋದ್ಯೋಗಿಗಳು ನನ್ನ ಪ್ರಚಾರಕ್ಕೆ ನೆರವಾದರು. ಖಾಲಿ ಹೊಟ್ಟೆಯಲ್ಲಿ ಪ್ರಚಾರ ಮಾಡಿದ್ದು ಮಾತ್ರವಲ್ಲದೇ, ತಮ್ಮ ಜೇಬಿನಿಂದಲೇ ಖರ್ಚು ಮಾಡಿದ್ದಾರೆ. ತುರ್ತಾಗಿ ದಾಖಲೆಗಳನ್ನು ಸಲ್ಲಿಸಲು ಭೋಪಾಲ್ ಗೆ ತೆರಳಬೇಕಿತ್ತು. ನಾಲ್ಕು ಚಕ್ರದ ವಾಹನ ವ್ಯವಸ್ಥೆಗೊಳಿಸಲು ಸಾಧ್ಯವಾಗದೇ ಮೋಟರ್ ಸೈಕಲ್ನಲ್ಲೇ ತೆರಳಿದೆ" ಎಂದು ಅವರು ಹೇಳಿದರು.
"ನಾನು ಖಚಿತವಾಗಿಯೂ ತೀರಾ ಬಡವ. ಆದರೆ ದುರ್ಬಲರಿಗಾಗಿ ಒಳ್ಳೆಯ ಕೆಲಸ ಮಾಡುವ ಸಂಕಲ್ಪ ನನ್ನದು. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಹಾಗೂ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುವಂತೆ ಮಾಡುತ್ತೇನೆ" ಎಂದರು.