ಮಣಿಪುರ: ಬಾಂಬ್ ಸ್ಫೋಟದಲ್ಲಿ ಮಾಜಿ ಶಾಸಕನ ಪತ್ನಿ ಮೃತ್ಯು
Photo credit: indiatodayne.in
ಇಂಫಾಲ: ತಮ್ಮ ನಿವಾಸದ ಬಳಿ ದುಷ್ಕರ್ಮಿಗಳು ಎಸೆದ ಬಾಂಬ್ ಸ್ಫೋಟಿಸಿದ್ದರಿಂದ ಮಣಿಪುರದ ಮಾಜಿ ಶಾಸಕ ಯಾಮ್ತೋಂಗ್ ಹೌಕಿಪ್ ಅವರ ಪತ್ನಿ ಚಾರುಬಾಲ ಮೃತಪಟ್ಟಿದ್ದಾರೆ. ಈ ಘಟನೆಯು ಶನಿವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಯಾಮ್ತಾಂಗ್ ಹೌಕಿಪ್ ಅವರ ನಿವಾಸದ ಬಳಿ ನಡೆದಿದೆ.
ಹೌಕಿಪ್ ಅವರು ಕುಕಿ-ಝೋ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಂಗ್ ಪೋಕ್ಪಿ ಜಿಲ್ಲೆಯ ಸಾಯಿಕುಲ್ ಗ್ರಾಮದ ನಿವಾಸಿಯಾಗಿದ್ದಾರೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಮೈತೈ ಸಮುದಾಯದವರಾದ ಅವರ ಮತ್ತೋರ್ವ ಪತ್ನಿ ಚಾರುಬಾಲ ಕೈದೋಟದಲ್ಲಿದ್ದರು ಎಂದು ಹೇಳಲಾಗಿದೆ. ಈ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತಮ್ಮ ನಿವಾಸದಲ್ಲಿ ಹೌಕಿಪ್ ಹಾಗೂ ಅವರ ಪುತ್ರಿ ಕೂಡಾ ಇದ್ದರಾದರೂ, ಈ ಸ್ಫೋಟದಲ್ಲಿ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ದಾಳಿಗೆ ಕಾರಣವೇನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬಂಡುಕೋರ ಗುಂಪಾದ ಯುಕೆಎಲ್ಎಫ್ ನ ಸದಸ್ಯರು ಹಾಗೂ ಕುಕಿ ಗ್ರಾಮ ಸ್ವಯಂಸೇವಕರ ನಡುವೆ ತೆಂಗ್ನೌಪಾಲ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೂವರು ಮೃತಪಟ್ಟ ನಂತರ ಈ ಘಟನೆ ನಡೆದಿದೆ.
ಈ ಹಿಂಸಾಚಾರದಲ್ಲಿ ಗ್ರಾಮದ ಸ್ವಯಂಸೇವಕರು ಯುಕೆಎಲ್ಎಫ್ ಮುಖ್ಯಸ್ಥರ ಮನೆಗೆ ಬೆಂಕಿ ಹಚ್ಚಿದ್ದರು. ಈ ಎರಡು ಗುಂಪುಗಳ ನಡುವಿನ ಸಂಘರ್ಷದ ಕಾರಣ ಇನ್ನೂ ತಿಳಿದು ಬಂದಿಲ್ಲ.