ಸಾರ್ವಜನಿಕ ಸೇವಾ ಜೀವನಕ್ಕೆ ವಿದಾಯ ಹೇಳಿದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಕೂಡಲೇ ಅಳಿಸಿ ಹಾಕಿದ ಬಿಜೆಪಿ ನಾಯಕ

ರಾಜೀವ್ ಚಂದ್ರಶೇಖರ್ | PC : PTI
ಹೊಸದಿಲ್ಲಿ: 18 ವರ್ಷಗಳ ತಮ್ಮ ಸಾರ್ವಜನಿಕ ಜೀವನಕ್ಕೆ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇಂದು ವಿದಾಯ ಹೇಳಿದ್ದಾರೆ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಅವರು, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ನಂತರ ಆ ಪೋಸ್ಟ್ ಅನ್ನು ಅಳಿಸಿ ಹಾಕಿದರು.
“ನನ್ನ 18 ವರ್ಷಗಳ ಸಾರ್ವಜನಿಕ ಜೀವನಕ್ಕೆ ಇಂದು ತೆರೆ ಎಳೆಯುತ್ತಿದ್ದೇನೆ. ಈ ಪೈಕಿ ನನಗೆ ನರೇಂದ್ರ ಮೋದಿ ಸರಕಾರದ ಎರಡನೆ ಅವಧಿಯಲ್ಲಿ ಮೂರು ವರ್ಷ ಸಚಿವನಾಗಿ ಕೆಲಸ ನಿರ್ವಹಿಸುವ ಅವಕಾಶ ದೊರೆತಿತ್ತು. ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯಾಗಿ ನನ್ನ 18 ವರ್ಷದ ಸಾರ್ವಜನಿಕ ಜೀವನವನ್ನು ಅಂತ್ಯಗೊಳಿಸಲು ನಾನು ಖಂಡಿತ ಬಯಸಿರಲಿಲ್ಲ. ಆದರೆ, ಪರಿಸ್ಥಿತಿ ಹೀಗೆಯೇ ಬದಲಾಗುವುದು” ಎಂದು ತಮ್ಮ ಪೋಸ್ಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ಇದೇ ವೇಳೆ ತಮಗೆ ಪ್ರೇರಣೆಯಾದ ಹಾಗೂ ಚೈತನ್ಯ ಒದಗಿಸಿದ ಎಲ್ಲ ಕಾರ್ಯಕರ್ತರು ಹಾಗೂ ನಾಯಕರು ಸೇರಿದಂತೆ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಅವರು ಧನ್ಯವಾದ ಸಲ್ಲಿಸಿದ್ದಾರೆ. ಇದರೊಂದಿಗೆ ಸರಕಾರದಲ್ಲಿ ತಮ್ಮೊಂದಿಗೆ ಮೂರು ವರ್ಷ ಕಾರ್ಯನಿರ್ವಹಿಸಿದ ಎಲ್ಲ ಸಹೋದ್ಯೋಗಿಗಳಿಗೂ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ, ಪಕ್ಷವನ್ನು ಬೆಂಬಲಿಸುವುದನ್ನು ಹಾಗೂ ಅದಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿನಿಧಿಸುತ್ತಿರುವ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಡೆದ ಚುನಾವಣೆಯಲ್ಲಿ ರಾಜೀವ್ ಚಂದ್ರಶೇಖರ್ ಕೇವಲ 16,077 ಮತಗಳ ಅಂತರದಿಂದ ಪರಾಭವಗೊಂಡಿದ್ದರು.