ಸುಪ್ರೀಂ ಕೋರ್ಟ್ನ ಮಾಜಿ ವಕೀಲ, ಹಿರಿಯ ವಿದ್ವಾಂಸ ಎ ಜಿ ನೂರಾನಿ ನಿಧನ
ಎ ಜಿ ನೂರಾನಿ | PC: The Hindu
ಮುಂಬೈ : ಸುಪ್ರೀಂ ಕೋರ್ಟ್ನ ಮಾಜಿ ವಕೀಲ, ವಿದ್ವಾಂಸ ಮತ್ತು ರಾಜಕೀಯ ವಿಮರ್ಶಕ ಅಬ್ದುಲ್ ಗಫೂರ್ ನೂರಾನಿ ಗುರುವಾರ ಮುಂಬೈನಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ನೂರಾನಿ ಅವರು ಕಾನೂನು, ಇತಿಹಾಸ ಮತ್ತು ರಾಜಕೀಯ ಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳಿಗೆ ನೆನಪಿನಲ್ಲುಳಿಯುತ್ತಾರೆ. ತಮ್ಮ ಸುದೀರ್ಘ ಮತ್ತು ವೃತ್ತಿಜೀವನದುದ್ದಕ್ಕೂ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕತೆಯ ತತ್ವಗಳನ್ನು ಎತ್ತಿಹಿಡಿದ ಬುದ್ಧಿಜೀವಿ ಎಂದು ಅವರನ್ನು ನೆನಪಿಸಿಕೊಳ್ಳುತ್ತಾರೆ.
ಖ್ಯಾತ ವಕೀಲರಾಗಿ, ಸಾಂವಿಧಾನಿಕ ತಜ್ಞ ಮತ್ತು ಲೇಖಕರಾಗಿ ಆರು ದಶಕಗಳಿಂದ ಭಾರತದಲ್ಲಿ ಕಾನೂನು ಪಾಂಡಿತ್ಯ ಮತ್ತು ರಾಜಕೀಯ ವಿಶ್ಲೇಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ನೂರಾನಿ ಅವರು ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಒಳನೋಟವುಳ್ಳ ವಿಶ್ಲೇಷಣೆಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟರು.
1930 ರಲ್ಲಿ ಬಾಂಬೆಯಲ್ಲಿ (ಈಗ ಮುಂಬೈ) ಜನಿಸಿದ ಅಬ್ದುಲ್ ಗಫೂರ್ ಅಬ್ದುಲ್ ಮಜೀದ್ ನೂರಾನಿ ಅವರು 1953 ರಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕಾನೂನು ಅಭ್ಯಾಸ ಮಾಡುತ್ತಿದ್ದರೂ, ನೂರಾನಿ ತಮ್ಮ ಹೆಚ್ಚಿನ ಸಮಯವನ್ನು ಕಾನೂನು, ರಾಜಕೀಯ ಮತ್ತು ಐತಿಹಾಸಿಕ ವಿಷಯಗಳ ಬಗ್ಗೆ ಬರೆಯಲು ಮೀಸಲಿಟ್ಟರು. ಅವರ ತೀಕ್ಷ್ಣವಾದ ಬುದ್ಧಿಶಕ್ತಿ ಮತ್ತು ಸಾಂವಿಧಾನಿಕ ವಿಷಯಗಳ ಆಳವಾದ ಜ್ಞಾನವು ಅವರನ್ನು ಭಾರತೀಯ ರಾಜಕೀಯ ಮತ್ತು ನ್ಯಾಯಶಾಸ್ತ್ರದ ಬಗ್ಗೆ ಬೇಡಿಕೆಯುಳ್ಳ ವ್ಯಾಖ್ಯಾನಕಾರರನ್ನಾಗಿ ಮಾಡಿತು
ಎಕನಾಮಿಕ್ & ಪೊಲಿಟಿಕಲ್ ವೀಕ್ಲಿ, ದಿ ಹಿಂದೂಸ್ತಾನ್ ಟೈಮ್ಸ್ ಮತ್ತು ದಿ ಸ್ಟೇಟ್ಸ್ಮನ್ನಂತಹ ಪ್ರಮುಖ ಪ್ರಕಟಣೆಗಳಿಗೆ ನೂರಾನಿ ನಿಯಮಿತವಾಗಿ ಬರೆಯುತ್ತಿದ್ದರು. 1980 ರ ದಶಕದಲ್ಲಿ ಪ್ರಾರಂಭವಾದ ಫ್ರಂಟ್ಲೈನ್ ನಿಯತಕಾಲಿಕದೊಂದಿಗಿನ ಅವರ ಒಡನಾಟವು ಅವರ ಮನಮುಟ್ಟುವ ಬರವಣಿಗೆಯನ್ನು ಓದುಗರಿಗೆ ತೆರೆದಿಟ್ಟಿತು. ಅವರ ಅಂಕಣ “ಸಾಂವಿಧಾನಿಕ ಪ್ರಶ್ನೆಗಳು” ಮೂರು ದಶಕಗಳ ಕಾಲ ಪ್ರಕಟವಾಯಿತು. ಸಂಕೀರ್ಣ ಕಾನೂನು ಸಮಸ್ಯೆಗ ಬಗ್ಗೆ ನಿಖರವಾದ ಸಂಶೋಧನೆ ಮತ್ತು ಸಮತೋಲಿತ ವಿಶ್ಲೇಷಣೆಗೆ ಅದು ಹೆಸರುವಾಸಿಯಾಗಿದೆ.
ಅವರು ದಿ ಕಾಶ್ಮೀರ್ ಕ್ವೆಶ್ಚನ್, ಕಾನ್ಸ್ಟಿಟ್ಯೂಷನಲ್ ಕ್ವೆಶ್ಚನ್ಸ್ ಇನ್ ಇಂಡಿಯಾ ಆಂಡ್ ದಿ ಆರೆಸ್ಸೆಸ್ ಆಂಡ್ ದಿ ಬಿಜೆಪಿ : ಎ ಡಿವಿಶನ್ ಆಫ್ ಲೇಬರ್, ಬದ್ರುದ್ದೀನ್ ತ್ಯಾಬ್ಜಿ ಮಿನಿಸ್ಟರ್ಸ್ ಮಿಸ್ ಕಂಡೆಕ್ಟ್, ಬ್ರೆಝ್ನವ್ಸ್ ಪ್ಲಾನ್ ಫಾರ್ ಏಷಿಯನ್ ಸೆಕ್ಯೂರಿಟಿ, ದಿ ಪ್ರೆಸಿದೆನ್ಶಿಯಲ್ ಸಿಸ್ಟೆಮ್ಸ್, ದಿ ಟ್ರಯಲ್ ಆಫ್ ಭಗತ್ ಸಿಂಗ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ನೂರಾನಿ ಅವರ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಸಂತಾಪ ಸೂಚಿಸಿದ್ದಾರೆ. “ಇಂದು ಮುಂಜಾನೆ ಎ ಜಿ ನೂರಾನಿ ಅವರ ನಿಧನದ ಬಗ್ಗೆ ಕೇಳಿ ವಿಷಾದವಾಯಿತು. ನೂರಾನಿ ಅವರು ಒಬ್ಬ ಲೇಖಕ, ನಿಪುಣ ವಕೀಲ, ವಿದ್ವಾಂಸ ಮತ್ತು ರಾಜಕೀಯ ವಿಮರ್ಶಕ. ಅವರು ಕಾನೂನಿನ ವಿಷಯಗಳ ಬಗ್ಗೆ ಮತ್ತು ಕಾಶ್ಮೀರ, ಆರೆಸ್ಸೆಸ್ ಮತ್ತು ಸಂವಿಧಾನದಂತಹ ವಿಷಯಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಅಲ್ಲಾಹನು ಅವರಿಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ, ”ಎಂದು ಉಮರ್ ಅಬ್ದುಲ್ಲಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಸದುದ್ದೀನ್ ಉವೈಸಿ ಅವರು ಎಕ್ಸ್ ಸಂದೇಶದಲ್ಲಿ, “ವಿದ್ವಾಂಸರಲ್ಲಿ ದಿಗ್ಗಜರಾದ ಎಜಿ ನೂರಾನಿ ನಿಧನರಾಗಿದ್ದಾರೆ. ನಾನು ಅವರಿಂದ ಸಂವಿಧಾನದಿಂದ ಕಾಶ್ಮೀರ, ಚೀನಾದವರೆಗೆ ತಿಳಿದುಕೊಂಡಿದ್ದೇನೆ. ಉತ್ತಮ ಆಹಾರವನ್ನು ಮೆಚ್ಚುವ ಕಲೆಯನ್ನು ಅವರಿಂದ ಕಲಿತುಕೊಂಡಿದ್ದೇನೆ. ಅಲ್ಲಾಹನು ಅವರಿಗೆ ಮಗ್ಫಿರತ್ ನೀಡಲಿ” ಎಂದು ತಿಳಿಸಿದ್ದಾರೆ.
ಸೌಜನ್ಯ : frontline.thehindu.com, indianexpress.com