ಆರ್‌ಪಿಎಫ್ ಕಾನ್ಸ್‌ಟೇಬಲ್‌ನಿಂದ ರೈಲಿನಲ್ಲಿ ನಾಲ್ವರ ಹತ್ಯೆ: ಕೇಂದ್ರದ ಸೂಚನೆ ಮೇರೆಗೆ ರಾಣಾ ಅಯ್ಯೂಬ್, ಉವೈಸಿ ಟ್ವೀಟ್‌ಗಳನ್ನು ಅಳಿಸಿದ ಟ್ವಿಟರ್
ಹೊಸದಿಲ್ಲಿ: ಚಲಿಸುತ್ತಿರುವ ರೈಲಿನಲ್ಲಿ ರೈಲ್ವೇ ಸುರಕ್ಷತಾ ಪಡೆಯ ಒಬ್ಬ ಕಾನ್ಸ್‌ಟೇಬಲ್ ನಡೆಸಿದ ಗುಂಡಿನ ದಾಳಿಯ ಬಗ್ಗೆ ಪತ್ರಕರ್ತೆ ರಾಣಾ ಅಯ್ಯೂಬ್ ಮತ್ತು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸದುದ್ದೀನ್ ಉವೈಸಿ ಮಾಡಿರುವ ಟ್ವೀಟ್‌ಗಳನ್ನು ಕೇಂದ್ರ ಸರಕಾರದ ಸೂಚನೆಯಂತೆ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಸೋಮವಾರ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ರೈಲ್ವೇ ಸುರಕ್ಷತಾ ಪಡೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಕಾರಾಮ್ ಮೀನಾ ಮತ್ತು ಮೂವರು ಮುಸ್ಲಿಮರನ್ನು ಗುಂಡು ಹಾರಿಸಿ ಕೊಂದಿದ್ದನು. ಟಿಕಾರಾಮ್ ಮೀನಾರನ್ನು ಕೊಂದ ಬಳಿಕ, ಚೇತನ್ ಸಿಮಗ್ ತನ್ನ ಬಲಿಪಶುಗಳನ್ನು ಆಯ್ದುಕೊಳ್ಳುವುದಕ್ಕಾಗಿ ರೈಲಿನಲ್ಲಿ ಹಲವಾರು ಬೋಗಿಗಳಲ್ಲಿ ಹುಡಕಾಡಿದ್ದನು.
ಓರ್ವ ಮುಸ್ಲಿಮ್ ವ್ಯಕ್ತಿಯ ದೇಹ ತನ್ನ ಕಾಲ ಬಳಿ ಇರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ತಾನು ಹೊಗಳುವುದು ಕೇಳುವಂತೆ ವೀಡಿಯೊ ಮಾಡುವಂತೆ ಅವರು ರೈಲು ಪ್ರಯಾಣಿಕರಿಗೆ ಸೂಚಿಸಿದ್ದನು.
‘‘ಅವರು ಪಾಕಿಸ್ತಾನದಿಂದ ಕಾರ್ಯಾಚರಣೆ ಮಾಡುತ್ತಾರೆ. ಇದನ್ನು ಭಾರತದ ಮಾಧ್ಯಮಗಳು ಹೇಳುತ್ತಿವೆ. ಮಾಧ್ಯಮಗಳು ಇದನ್ನು ಪತ್ತೆಹಚ್ಚುತ್ತಿವೆ. ಅವುಗಳಿಗೆ ಎಲ್ಲವೂ ಗೊತ್ತು. ನೀವು ವೋಟ್ ಮಾಡಬೇಕಾದರೆ, ನೀವು ಭಾರತದಲ್ಲಿ ವಾಸಿಸಬೇಕಾದರೆ, ನೀವು ಮೋದಿ ಮತ್ತು ಯೋಗಿಗೆ ಮತ ಹಾಕಬೇಕು. ಇವರಿಬ್ಬರಿಗೆ ಹಾಕಬೇಕು. ಮತ್ತೆ ನಿಮ್ಮ ಠಾಕ್ರೆಗೆ ಹಾಕಬೇಕು’’ ಎಂದು ವೀಡಿಯೊದಲ್ಲಿ ಸಿಂಗ್ ಹೇಳುವುದನ್ನು ಕೇಳಬಹುದಾಗಿದೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವೀಡಿಯೊವನ್ನು ಹಂಚಿಕೊಂಡಿರುವ ಅಯ್ಯೂಬ್ ಮತ್ತು ಉವೈಸಿ, ‘‘ಭಾರತದ ಮುಸ್ಲಿಂ ವಿರೋಧಿ ದ್ವೇಷದ ಮಾತುಗಳಿಗೆ ನರೇಂದ್ರ ಮೋದಿ ಸರಕಾರವೇ ಜವಾಬ್ದಾರಿ’’ ಎಂದು ಹೇಳಿದ್ದರು.
ಸೋಮವಾರ ಟ್ವೀಟ್ ಮಾಡಿದ ಅಯ್ಯೂಬ್, ‘‘ರೈಲಿನಲ್ಲಿ ನಡೆದ ಘಟನೆಯ ಬಗ್ಗೆ ನಾನು ಮಾಡಿದ ಟ್ವೀಟನ್ನು ಭಾರತ ಸರಕಾರದ ಸೂಚನೆಯ ಮೇರೆಗೆ ಭಾರತದಲ್ಲಿ ತಡೆಹಿಡಿಯಲಾಗಿದೆ. ಇದನ್ನು ಟ್ವಿಟರ್ ನನಗೆ ತಿಳಿಸಿದೆ. ಪ್ರಜಾಪ್ರಭುತ್ವದ ಜನನಿಗೆ ಇದು ತುಂಬಾ ಹೆಚ್ಚಾಯಿತು’’ ಎಂದು ಹೇಳಿದ್ದಾರೆ.
ಈ ನಡುವೆ, ವೀಡಿಯೊವನ್ನು ಹಾಕುವ ಮೂಲಕ ನಾನು ಯಾವ ಕಾನೂನನ್ನು ಉಲ್ಲಂಘಿಸಿದ್ದೇನೆ ಎಂದು ಉವೈಸಿ ಟ್ವಿಟರ್‌ನಲ್ಲಿ ಕೇಳಿದ್ದಾರೆ.
ಈ ಘಟನೆಯ ಬಗ್ಗೆ ಆಲ್ಟ್ ನ್ಯೂಸ್‌ನ ಮುಹಮ್ಮದ್ ಝುಬೈರ್, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾರ ಒಂದು ಅಭಿಮಾನಿ ಖಾತೆ ಮತ್ತು ವಿಡಂಬನಾ ಖಾತೆ ನಿಮೋ ಯಾದವ್ ಮಾಡಿರುವ ಟ್ವೀಟ್‌ಗಳನ್ನೂ ತೆಗೆದುಹಾಕಲಾಗಿದೆ.