ದಲಿತ ಯುವಕನೊಂದಿಗೆ ಸ್ನೇಹ: ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಶರಣಾದ 14 ರ ಬಾಲಕ
ಲಕ್ನೋ: ಉತ್ತರ ಪ್ರದೇಶದ ಕೌಶಂಬಿಯ ಹಳ್ಳಿಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ದಲಿತ ಯುವಕನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದುದನ್ನು ಕಂಡು ತನ್ನ 15 ವರ್ಷದ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.
ನಂತರ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಅಕ್ಕನನ್ನು ಕೊಂದಿರುವುದಾಗಿ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಕೊಲೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬಾಲಕನ ತಂದೆ, ತಾಯಿ ಹಾಗೂ ಹಿರಿಯ ಸಹೋದರನನ್ನೂ ಪೊಲೀಸರು ಬಂಧಿಸಿದ್ದಾರೆ.
“ಹುಡುಗಿಯ ಪೋಷಕರು ಮತ್ತು ಹಿರಿಯ ಸಹೋದರ ಕೂಡ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಬಾಲಕನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು” ಎಂದು ಎಸ್ಪಿ ಕೌಶಂಬಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಒಬಿಸಿಗೆ ಸಮುದಾಯಕ್ಕೆ ಸೇರಿದ 15 ವರ್ಷದ ಬಾಲಕಿ ದಲಿತ ಯುವಕನೊಂದಿಗೆ ಕೆಲವು ಸಮಯದಿಂದ ಗೆಳೆತನ ಹೊಂದಿದ್ದಳು. ಇದಕ್ಕೆ ಕುಟುಂಬವು ವಿರೋಧಿಸಿದ್ದು, ದಲಿತ ಯುವಕನನ್ನು ಭೇಟಿಯಾಗುವುದನ್ನು ತಪ್ಪಿಸಲು ಆಕೆಯನ್ನು ದೆಹಲಿಯಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಕಳುಹಿಸಿದ್ದರು.
ಅಕ್ಕ ದಲಿತ ಯುವಕನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿರುವುದನ್ನು ನೋಡಿ ಆಕೆಯನ್ನು ತಾನು ಕೊಂದಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ ಎಂದು ಸ್ಥಳೀಯ ಠಾಣೆ ಪ್ರಭಾರಿ ತಿಳಿಸಿದ್ದಾರೆ.
“ಪೊಲೀಸ್ ತಂಡವು ಗ್ರಾಮವನ್ನು ತಲುಪಿದಾಗ ಬಾಲಕಿಯ ಮೃತದೇಹವು ಮನೆಯಲ್ಲಿ ಬಿದ್ದಿತ್ತು” ಎಂದು ಅವರು ತಿಳಿಸಿದ್ದಾರೆ.
“ಶುಕ್ರವಾರ ರಾತ್ರಿ, ಅಕ್ಕ ದಲಿತ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ನೋಡಿದ್ದೇನೆ ಎಂದು ಆರೋಪಿ ಬಾಲಕ ಕುಟುಂಬ ಸದಸ್ಯರಿಗೆ ತಿಳಿಸಿದ್ದು, ಆಕೆಯನ್ನು ಕುಟುಂಬ ಸದಸ್ಯರು ಪರಿಶೀಲಿಸಿದಾಗ ಅವಳ ಬಟ್ಟೆಗಳ ನಡುವೆ ಮೊಬೈಲ್ ಫೋನ್ ಸಿಕ್ಕಿದೆ. ಬಳಿಕ ಆಕೆಯ ಕುಟುಂಬ ಸದಸ್ಯರು ಅವಳ ಕೈಗಳನ್ನು ಕಟ್ಟಿಹಾಕಿ ಥಳಿಸಿದ್ದಾರೆ. ಆಕೆಯ ಸಹೋದರರು ಕೊಡಲಿ ಮತ್ತು ಸುತ್ತಿಗೆಯಿಂದ ಹೊಡೆದಿದ್ದಾರೆಂದು ಹೇಳಲಾಗಿದೆ. ಮರುದಿನ ಬೆಳಿಗ್ಗೆ, ಕಿರಿಯ ಮಗ ಪೊಲೀಸ್ ಠಾಣೆಗೆ ತಲುಪಿ ತಾನೇ ಕೊಲೆ ಮಾಡಿರುವುದಾಗಿ ಹೇಳಿ ಶರಣಾಗಿದ್ದಾನೆ” ಎಂದು ಅಧಿಕಾರಿ ತಿಳಿಸಿದ್ದಾರೆ.