ತೃತೀಯ ರಂಗದ ಕನಸಿನಿಂದ ತೆಲಂಗಾಣದಲ್ಲಿ ಪತನದವರೆಗೆ; ಕೆಸಿಆರ್ಗೆ ಭಾರೀ ಹಿನ್ನಡೆ
ತೆಲಂಗಾಣ ಚುನಾವಣಾ ಫಲಿತಾಂಶ
ಕೆ.ಚಂದ್ರಶೇಖರ ರಾವ್ | Photo: PTI
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (KCR) ಅವರ ಕನಸಿನ ಓಟ ಅಂತ್ಯಗೊಂಡಂತೆ ಕಾಣುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಭಾರೀ ಗೆಲುವು ಸಾಧಿಸಿದ್ದು ಮಾತ್ರವಲ್ಲ, ಎರಡು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾದ ಕೆಸಿಆರ್ ತಾನು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಎದುರಾಳಿಗಿಂತ ಹಿಂದಿದ್ದಾರೆ. ತನ್ನ ಭದ್ರಕೋಟೆ ಗಜ್ವೆಲ್ ನಲ್ಲಿ ಕೆಸಿಆರ್ ಮುಂದಿದ್ದರೆ ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ ರೆಡ್ಡಿ ಕೆಸಿಆರ್ ಅವರನ್ನು ಹಿಂದಿಕ್ಕಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ (ಈಗ ಬಿಆರ್ಎಸ್)ಯು ಪ್ರತ್ಯೇಕ ತೆಲಂಗಾಣ ರಾಜ್ಯ ಆಂದೋಲನದ ಮುಂಚೂಣಿಯಲ್ಲಿತ್ತು. 2014ರಲ್ಲಿ ಆಂಧ್ರಪ್ರದೇಶದಿಂದ ಬೇರ್ಪಟ್ಟು ತೆಲಂಗಾಣ ಅಸ್ತಿತ್ವಕ್ಕೆ ಬಂದ ಬಳಿಕ ಒಂದು ದಶಕ ಕಾಲ ಅದು ರಾಜ್ಯದ ಜನರ ಪ್ರಶ್ನಾತೀತ ಬೆಂಬಲವನ್ನು ಹೊಂದಿತ್ತು. ಆದರೆ ಈಗ ತೆಲಂಗಾಣ ಬದಲಾವಣೆಗೆ ಮನಸ್ಸು ಮಾಡಿದೆ.
ಕೆಸಿಆರ್ ಮತ್ತು ಅವರ ಪಕ್ಷದ ಹಿರಿಯ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಜನರ ಮನಃಸ್ಥಿತಿ ಬದಲಾಗಲು ಭಾಗಶಃ ಕಾರಣಗಳಾಗಿವೆ. ಕೆಸಿಆರ್ ಎನ್ಡಿಎಗೆ ಸೇರಲು ಪ್ರಯತ್ನಿಸಿದ್ದರು ಮತ್ತು ತಿರಸ್ಕೃತಗೊಂಡಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು BRSಗೆ ಭಾರೀ ಹೊಡೆತವನ್ನು ನೀಡಿದೆ.
ನೆರೆಯ ಕರ್ನಾಟಕದಲ್ಲಿ ಗೆಲುವಿನ ಬಳಿಕ ಭಾರೀ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಈ ಅವಕಾಶವನ್ನು ಬಿಟ್ಟಿರಲಿಲ್ಲ. BRS ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಅದು ಪ್ರತಿಪಾದಿಸಿತ್ತು. ಕೆಸಿಆರ್ ಪುತ್ರಿ ಕೆ.ಕವಿತಾ ಅವರ ಹೆಸರೂ ದಿಲ್ಲಿ ಮದ್ಯ ಹಗರಣದಲ್ಲಿ ಕೇಳಿ ಬಂದಿತ್ತಾದರೂ ದಿಲ್ಲಿಯ ಆಡಳಿತಾರೂಢ ಆಪ್ ನ ನಾಯಕರನ್ನು ಬಂಧಿಸಿದ ಕೇಂದ್ರೀಯ ಏಜೆನ್ಸಿಗಳು ಕವಿತಾರನ್ನು ಬಂಧಿಸುವುದು ಬಿಡಿ,ಅವರನ್ನು ವಿಚಾರಣೆಗೂ ಒಳಪಡಿಸಿಲ್ಲ ಎಂದು ಹೇಳುವ ಮೂಲಕ ತನ್ನ ಪ್ರತಿಪಾದನೆಯನ್ನು ಅದು ಸಮರ್ಥಿಸಿಕೊಂಡಿತ್ತು.
ಕಳೆದ ದಶಕದ ಉತ್ತರಾರ್ಧದಲ್ಲಿ ಕೆಸಿಆರ್ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಬೆಳೆಸಿಕೊಂಡಿದ್ದರು. 2023ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗವನ್ನು ರಚಿಸುವ ಪ್ರಯತ್ನವಾಗಿ ಅವರು ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಸೇರಿದಂತೆ ವಿವಿಧ ಪ್ರತಿಪಕ್ಷ ನಾಯಕರನ್ನು ಭೇಟಿಯಾಗಿದ್ದರು.
ಆದರೆ ಆ ಉಪಕ್ರಮ ವಿಫಲಗೊಂಡಿತ್ತಾದರೂ ಕೆಸಿಆರ್ ತನ್ನ ಪ್ರಯತ್ನವನ್ನು ಕೈಬಿಟ್ಟಿರಲಿಲ್ಲ. ಪ್ರತಿಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಲು ಸಜ್ಜಾಗಿದ್ದಾಗ ಕೆಸಿಆರ್ ಕಾಂಗ್ರೆಸ್ ಅನ್ನು ಇಷ್ಟ ಪಡದ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಎಸ್ಪಿ ನಾಯಕ ಅಖಿಲೇಶ್ ಯಾದವ ಜೊತೆ ಹೆಚ್ಚಿನ ಒಡನಾಟವಿಟ್ಟುಕೊಂಡಿದ್ದರು.
ನಂತರದ ಮಹತ್ವದ ನಡೆಯೊಂದರಲ್ಲಿ ಕೆಸಿಆರ್ ತನ್ನ ಪಕ್ಷಕ್ಕೆ ಮರುನಾಮಕರಣ ಮಾಡಿದ್ದರು. ತೆಲಂಗಾಣದ ಬದಲಿಗೆ ಭಾರತ ಎಂದು ಸೇರಿಸಿಕೊಂಡಿದ್ದರು. ಈ ಬದಲಾವಣೆಯನ್ನು ಪ್ರಶ್ನಿಸಿದ್ದ ಅನೇಕರು ರಾಜ್ಯದ ಜನರಿಗೆ ಇದು ಇಷ್ಟವಾಗುವುದಿಲ್ಲ ಎಂದು ಹೇಳಿದ್ದರು. ಈಗ ಚುನಾವಣಾ ಫಲಿತಾಂಶ ಅವರು ಸರಿಯಾಗಿಯೇ ಹೇಳಿದ್ದರು ಎನ್ನುವುದನ್ನು ಸಾಬೀತು ಮಾಡಿದೆ. ತೆಲಂಗಾಣ ವಿಧಾನಸಭೆಯ 119 ಸ್ಥಾನಗಳ ಪೈಕಿ 68ರಲ್ಲಿ ಕಾಂಗ್ರೆಸ್ ಪಕ್ಷವು ಮುಂದಿದ್ದು,2018ರಲ್ಲಿ 88 ಸ್ಥಾನಗಳನ್ನು ಗೆದ್ದಿದ್ದ ಬಿಆರ್ಎಸ್ ಕೇವಲ 36 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವ ಸ್ಥಿತಿಯಲ್ಲಿದೆ