ಲೋಕಸಭೆ ಚುನಾವಣೆ ಬಳಿಕ ಪೂರ್ಣಪ್ರಮಾಣದ ಬಜೆಟ್: ಪ್ರಧಾನಿ ಮೋದಿ
Photo: PTI
ಹೊಸದಿಲ್ಲಿ: ಪ್ರಧಾನಿಯಾಗಿ ತಾವು ಮೂರನೇ ಅವಧಿಗೆ ಅವಕಾಶ ಪಡೆಯುವ ಬಗ್ಗೆ ತುಂಬು ಆತ್ಮವಿಶ್ವಾಸ ವ್ಯಕ್ತಪಡಿಸಿದ ನರೇಂದ್ರ ಮೋದಿ, ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು ಎಂದು ಬುಧವಾರ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಆರಂಭಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ನೀವು ತಿಳಿದಿರುವಂತೆ, ಸಾಂಪ್ರದಾಯಿಕವಾಗಿ, ಚುನಾವಣೆ ಅನಿವಾರ್ಯವಾದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವಂತಿಲ್ಲ. ಈ ಸಂಪ್ರದಾಯಕ್ಕೆ ನಾವು ಬದ್ಧರಾಗುತ್ತೇವೆ. ಈ ಬಾರಿ ನಿರ್ಮಲಾ ಜೀ ಅವರು ಕೆಲ ಮಾರ್ಗದರ್ಶಿ ಅಂಶಗಳೊಂದಿಗೆ ಬಜೆಟ್ ಮಂಡಿಸುತ್ತಿದ್ದಾರೆ" ಎಂದು ಹೇಳಿದರು.
ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೇರುವ ಸಾಧ್ಯತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ವಿವಿಧೆಡೆ ಬಿರುಕು ಕಾಣಿಸಿಕೊಂಡಿರುವುದು ಮತ್ತು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಬಿಜೆಪಿಯ ಅವಕಾಶಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹೇಳಿಕೆಗೆ ವಿಶೇಷ ಮಹತ್ವ ಬಂದಿದೆ.
ದೇಶ ಎಲ್ಲ ರಂಗಗಳಲ್ಲಿ ಮುನ್ನಡೆಯುತ್ತಿದ್ದು, ಸರ್ಕಾರ ಎಲ್ಲರ ಸೇರ್ಪಡೆಯ ಅಭಿವೃದ್ದಿಯತ್ತ ಗಮನ ಹರಿಸಿದೆ. ಮಹಿಳೆಯರಿಗೆ ಶೇ. 33 ಮೀಸಲಾತಿ, ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಹಿಳೆಯರನ್ನು ಕೇಂದ್ರಬಿಂದುವಾಗಿಸುವ ನಿರ್ಧಾರ ಮತ್ತಿತರ ಅಂಶಗಳನ್ನು ಬುಧವಾರ ಪ್ರಧಾನಿ ಉಲ್ಲೇಖಿಸಿದರು.