G20 ದಿಲ್ಲಿ ಶೃಂಗಸಭೆ ಮುಕ್ತಾಯ; ಬ್ರೆಝಿಲ್ ಗೆ ಪ್ರೆಸಿಡೆನ್ಸಿ ಬ್ಯಾಟನ್ ಹಸ್ತಾಂತರಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಜಿ 20 ಅಧ್ಯಕ್ಷ ಸ್ಥಾನದ ವಿಧ್ಯುಕ್ತ ವರ್ಗಾವಣೆಯ ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಬ್ಯಾಟನ್ ಅನ್ನು ಹಸ್ತಾಂತರಿಸಿದರು. ಉದಯೋನ್ಮುಖ ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ ಧ್ವನಿ ನೀಡುತ್ತಿರುವ ಭಾರತವನ್ನು ಬ್ರೆಝಿಲ್ ಅಧ್ಯಕ್ಷರು ಶ್ಲಾಘಿಸಿದರು.
"ನಾನು ಬ್ರೆಝಿಲ್ ಅಧ್ಯಕ್ಷ ಹಾಗೂ ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಅಭಿನಂದಿಸುತ್ತೇನೆ ಹಾಗೂ ಅವರಿಗೆ ಜಿ-20 ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ಬಯಸುತ್ತೇನೆ" ಎಂದು ಮೋದಿ ಹೇಳಿದರು.
"ನಿನ್ನೆ, ಅಧಿವೇಶನಗಳಲ್ಲಿ ನಾವು 'ಒಂದು ಭೂಮಿ, ಒಂದು ಕುಟುಂಬ' ಕುರಿತಾಗಿ ವ್ಯಾಪಕವಾದ ಚರ್ಚೆಗಳನ್ನು ನಡೆಸಿದ್ದೇವೆ. ಇಂದು G20 ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ದೃಷ್ಟಿಗೆ ಸಂಬಂಧಿಸಿದಂತೆ ಆಶಾವಾದಿ ಪ್ರಯತ್ನಗಳಿಗೆ ವೇದಿಕೆಯಾಗಿದೆ ಎಂಬ ತೃಪ್ತಿ ನನಗಿದೆ" ಎಂದು ಪ್ರಧಾನಿ ಮೋದಿ ಇಂದು ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದರು.
ಡಿಸೆಂಬರ್ 1 ರಂದು ಬ್ರೆಝಿಲ್ ಅಧಿಕೃತವಾಗಿ ಎಲೈಟ್ ಗ್ರೂಪಿಂಗ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಲುಲಾ ಡ ಸಿಲ್ವಾ ಅವರು ಮೋದಿಯವರನ್ನು ಅಭಿನಂದಿಸಿದರು ಹಾಗೂ ಉದಯೋನ್ಮುಖ ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ ಧ್ವನಿ ನೀಡುತ್ತಿರುವ ಭಾರತ ಶ್ಲಾಘಿಸಿದರು. ಭಾರತದ ಪ್ರಯತ್ನಗಳಿಗೆ ಧನ್ಯವಾದಗಳು ಎಂದರು.
ಲುಲಾ ಡ ಸಿಲ್ವಾ ಅವರು ಸಾಮಾಜಿಕ ಸೇರ್ಪಡೆ, ಹಸಿವಿನ ವಿರುದ್ಧದ ಹೋರಾಟ, ಶಕ್ತಿ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು G20 ಆದ್ಯತೆಗಳಾಗಿ ಪಟ್ಟಿ ಮಾಡಿದ್ದಾರೆ.
ವಿಶ್ವ ಬ್ಯಾಂಕ್ ಮತ್ತು IMF ನಲ್ಲಿ ಉದಯೋನ್ಮುಖ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನಾವು ಬಯಸುತ್ತೇವೆ ಎಂದು ಅವರು ಹೇಳಿದರು