2026ರಲ್ಲಿ ಗಗನಯಾನ, 2028ರಲ್ಲಿ ಚಂದ್ರಯಾನ 4: ಇಸ್ರೋ ಘೋಷಣೆ
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ PC: PTI
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಮುಖ ಬಾಹ್ಯಾಕಾಶ ಮಿಷನ್ ಗಳನ್ನು ಶನಿವಾರ ಪ್ರಕಟಿಸಿದೆ. ಆಕಾಶವಾಣಿಯಲ್ಲಿ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸ ನೀಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಈ ವೇಳಾಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ.
ಮಾನವಸಹಿತ ಬಾಹ್ಯಾಕಾಶ ಮಿಷನ್ ಗಗನಯಾನಿಗಳ ಕನಸು 2026ರಲ್ಲಿ ನನಸಾಗಲಿದೆ. ಚಂದ್ರನ ಮಾದರಿಯನ್ನು ಸಂಗ್ರಹಿಸಿ ತರುವ ಸ್ಯಾಂಪಲ್ ರಿಟರ್ನ್ ಮಿಷಿನ್ "ಚಂದ್ರಯಾನ-4" 2028ರಲ್ಲಿ ಉಡಾವಣೆಯಾಗಲಿದೆ ಮತ್ತು ಬಹು ನಿರೀಕ್ಷಿತ ಭಾರತ- ಅಮೆರಿಕದ ಜಂಟಿ ಎನ್ಐಎಸ್ಎಆರ್ ಯೋಜತೆ 2025ರಲ್ಲಿ ಕಾರ್ಯಗತಗೊಳ್ಳಲಿದೆ.
ಚಂದ್ರನ ಮೇಲೆ ಜಂಟಿಯಾಗಿ ಇಳಿಯುವ ಚಂದ್ರಯಾನ-5 ಯೋಜನೆಯನ್ನು ಜಪಾನ್ ಬಾಹ್ಯಾಕಾಶ ಏಜೆನ್ಸಿ ಜಾಕ್ಸಾ ಜತೆ ಕೈಗೊಳ್ಳುವುದಾಗಿಯೂ ಅಧ್ಯಕ್ಷ ಸೋಮನಾಥ್ ಬಹಿರಂಗಪಡಿಸಿದ್ದಾರೆ. ಮೂಲವಾಗಿ ಲುಪೆಕ್ಸ್ ಅಥವಾ ಚಂದ್ರನ ಧ್ರುವ ಸಂಶೋಧನೆಯ ಮಿಷನ್ ಗೆ ಕಾಲಮಿತಿ ನಿಗದಿಪಡಿಸಿರಲಿಲ್ಲ ಹಾಗೂ 2028ರ ಬಳಿಕ ಇದು ಕಾರ್ಯಗತಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು.
ಇದು ಅತ್ಯಂತ ಮಹತ್ವದ ಹಾಗೂ ಭಾರದ ಮಿಷನ್ ಆಗಿದ್ದು, ಚಂದ್ರಯಾನ-3ರ ರೋವರ್ 27 ಕೆಜಿ ತೂಕ ಹೊಂದಿದ್ದರೆ, ಚಂದ್ರಯಾನ-5ರ ರೋವರ್ 350 ಕೆ.ಜಿ ತೂಕ ಹೊಂದಿರುತ್ತದೆ ಎಂದು ಅವರು ಪ್ರಕಟಿಸಿದ್ದಾರೆ. ಈ ಅತ್ಯಂತ ಭಾರದ ಮಿಷನ್ ಗೆ ಭಾರತ ಲ್ಯಾಂಡರ್ ಒದಗಿಸಲಿದೆ. ರೋವರ್ ಜಪಾನ್ ನಿಂದ ಬರಲಿದೆ. ಇದು ಅತ್ಯಂತ ವೈಜ್ಞಾನಿಕ ಮಿಷನ್ ಆಗಿದ್ದು, ಚಂದ್ರನ ಮೇಲೆ ಮನುಷ್ಯರನ್ನು ಇಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋದಂತಾಗಲಿದೆ ಎಂದು ವಿವರಿಸಿದ್ದಾರೆ.
2040ರ ವೇಳೆಗೆ ಭಾರತದ ಬಾಹ್ಯಾಕಾಶ ಸಂಸ್ಥೆ, ಚಂದ್ರಲೋಕಕ್ಕೆ ಮಾನವಸಹಿತ ಮಿಷನ್ ಕೈಗೊಳ್ಳಲಿದೆ ಎಂದು ಸೋಮನಾಥ್ ಹೇಳಿದ್ದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.