ರಾಮ್ ತೇರಿ ಗಂಗಾ ಮೈಲಿ...! | ಬಿಹಾರದ ವಿವಿಧೆಡೆ ಗಂಗಾನದಿ ನೀರು ಸ್ನಾನಕ್ಕೆ ಅಯೋಗ್ಯ
► ನದಿದಂಡೆಯ ಪಟ್ಟಣಗಳಿಂದ ಚರಂಡಿ ನೀರು ವಿಸರ್ಜನೆಯಿಂದಾಗಿ ರೋಗಕಾರಕ ಅಧಿಕ ಪ್ರಮಾಣದಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳ ಉಪಸ್ಥಿತಿ ಪತ್ತೆ ► 2024-25ನೇ ಸಾಲಿನ ಬಿಹಾರ ಆರ್ಥಿಕ ಸರ್ವೇಕ್ಷಣಾ ವರದಿ

PC ; NDTV
ಹೊಸದಿಲ್ಲಿ: ಬ್ಯಾಕ್ಟೀರಿಯಾ ಸಂಕುಲಗಳ ಭಾರೀ ಪ್ರಮಾಣದ ಉಪಸ್ಥಿತಿಯಿಂದಾಗಿ ಬಿಹಾರದ ಹಲವೆಡೆ ಗಂಗಾನದಿಯ ನೀರು ಸ್ನಾನಕ್ಕೆ ಆಯೋಗ್ಯವಾಗಿದೆಯೆಂದು 2024-25ನೇ ಸಾಲಿನ ಬಿಹಾರ ಆರ್ಥಿಕ ಸರ್ವೇಕ್ಷಣಾ ವರದಿ ತಿಳಿಸಿದೆ.
ಮಹಾಕುಂಭಮೇಳದ ಅವಧಿಯಲ್ಲಿ ಪ್ರಯಾಗ್ರಾಜ್ನ ವಿವಿಧ ಸ್ಥಳಗಳಲ್ಲಿ ಅತಿಯಾದ ಫೀಕಲ್ ಕೊಲಿಫಾರ್ಮ್ನ ಪ್ರಮಾಣವು ಸ್ನಾನಕ್ಕೆ ಯೋಗ್ಯವಾದ ಪ್ರಾಥಮಿಕ ಮಾನದಂಡವನ್ನು ತಲುಪಲು ವಿಫಲವಾಗಿದೆಯೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಬಹಿರಂಗಪಡಿಸಿದ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.
ಗಂಗಾ ನದಿ ನೀರಿನನಲ್ಲಿ ಅಧಿಕ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಜಿಕಲ್ ಸಂಕುಲ (ಕೊಲಿಫೊರ್ಮ್ ಹಾಗೂ ಫೀಕಲ್ ಕೊಲಿಫಾರ್ಮ್)ಗಳ ಉಪಸ್ಥಿತಿಯಿರುವುದು ಕಂಡುಂದಿದೆ. ಗಂಗಾ ಹಾಗೂ ಅದರ ಉಪನದಿಗಳ ದಂಡೆಗಳಲ್ಲಿ ಇರುವ ನಗರಗಳಿಂದ ಒಳಚರಂಡಿ/ಮನೆಗಳ ತ್ಯಾಜ್ಯ ನೀರು ವಿಸರ್ಜನೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಬಿಹಾರದ ಆರ್ಥಿಕ ಸರ್ವೇಕ್ಷಣಾ ವರದಿ ತಿಳಿಸಿದೆ.
ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಪಿಎಸ್ಪಿಸಿಬಿಯ ಅಧ್ಯಕ್ಷ ಡಿ.ಕೆ.ಶುಕ್ಲಾ ಅವರು, ‘‘ ಸಂಸ್ಕರಿಸದ ಚರಂಡಿ ನೀರಿನ ಹರಿವಿನಿಂದಾಗಿ ಮಲದಲ್ಲಿ ಕಂಡುಬರುವ ಕೊಲಿಫೊರ್ಮ್ ಬ್ಯಾಕ್ಚೀರಿಯಾವು ಪತ್ತೆಯಾಗಿದೆ. ಈ ಬ್ಯಾಕ್ಟೀರಿಯಾಗಳ ಪ್ರಮಾಣವು ಹೆಚ್ಚಿದ್ದಷ್ಟೂ, ರೋಗಗಳನ್ನುಂಟು ಮಾಡುವ ಪ್ಯಾಥೋಜನ್ಗಳು ನೀರಿನಲ್ಲಿ ಅಧಿಕವಾಗಿರುತ್ತದೆ. ಸಿಪಿಸಿಬಿ ಮಾನದಂಡಗಳ ಪ್ರಕಾರ ನದಿ ನೀರಿನಲ್ಲಿ ಫೀಕಲ್ ಕೊಲಿಪೊರ್ಮ್ಗಳ ಅನುಮತಿಸಲ್ಪಟ್ಟ ಮಿತಿಯು 2500 ಎಂಪಿಎನ್/ 100 ಮೀ.ಲೀ. ಆಗಿದೆ.
ಗಂಗಾನದಿಯ ದಡದಲ್ಲಿರುವ ಬಿಹಾರದ ಪಟ್ಟಣಗಳಲ್ಲಿ ಬುಕ್ಸಾರ್, ಚಾಪ್ರಾ(ಸಾರನ್), ದಿಗ್ವಾರಾ, ಸೋನೆಪುರ, ಅಮನೀರ್, ದಾನಾಪುರ, ಪಟ್ನಾ,ಫತುಹಾ, ಬಖ್ತಿಯಾರ್ಪುರ, ಬಾರಹ, ಮೊಕಾಮಾ, ಬೆಗುಸರಾಯ್,ಖಗಾರಿಯಾ, ಲಖಿಸರಾಯ್, ಮನಿಹರಿ,ಮಂಗೇರ್,ಜಮಾಲ್ಪುರ, ಸುಲ್ತಾನ್ಗಂಜ್,ಭಾಗಲ್ಪುರ ಹಾಗೂ ಕಹಾಲ್ಗಾಂವ್ ಒಳಗೊಂಡಿವೆ.
ನದಿನೀರಿನ ಪರಿಎಶುದ್ಧತೆಯ ಇತರ ಮಾನದಂಡಗಳಾದ ಪಿಎಚ್ (ಆ್ಯಸಿಡಿಟಿ ಅಥವಾ ಬೇಸಿಸಿಟಿ),ಕರಗಿದ ಆಮ್ಲಜನಕ, ಜೈವಿಕ ರಾಸಾಯನಿಕ ಆಮ್ಲಜನಕದ ಬೇಡಿಕೆ (ಬಿಓಡಿ) ಶಿಫಾರಸು ಮಾಡಲ್ಪಟ್ಟ ಮಿತಿಯಲ್ಲಿ ಇರುವುದು ಕಂಡುಬಂದಿದ್ದು, ಜಲಚರಗಳು, ವನ್ಯಜೀವಿಗಳಿಗೆ, ಮೀನುಗಾರಿಕೆ ಹಾಗೂ ನೀರಾವರಿಗೆ ಯೋಗ್ಯವಾಗಿರುವುದನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ.