ಗಾಝಾ ನರಮೇಧ ಮಾನವ ಜನಾಂಗದ ಇತಿಹಾಸದಲ್ಲಿಯೇ ಅತ್ಯಂತ ನಾಚಿಕೆಗೇಡಿನ ವಿಷಯ: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಇಸ್ರೇಲ್ ಅನ್ನು ಹೆಸರಿಸದೆ ಗಾಝಾ ಪಟ್ಟಿಯಲ್ಲಿ ಅದರ ಕಾರ್ಯಾಚರಣೆಗಳನ್ನು ಕಟುವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಅವರು, ನರಮೇಧವು ಭಯಾನಕ ಪೂರ್ವ ನಿದರ್ಶನವನ್ನು ಸ್ಥಾಪಿಸಿದೆ ಮತ್ತು ಇದು ಮಾನವ ಜನಾಂಗದ ಇತಿಹಾಸದಲ್ಲಿಯೇ ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿಯ ಪೋಸ್ಟ್ನಲ್ಲಿ ಗಾಝಾದಲ್ಲಿ ಆಸ್ಪತ್ರೆಗಳ ಮೇಲಿನ ಬಾಂಬ್ ದಾಳಿಗಳನ್ನು ಮತ್ತು ವೈದ್ಯರಿಗೆ ಚಿತ್ರಹಿಂಸೆಯ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು,ಇಸ್ರೇಲ್ನಲ್ಲಿಯ ದಮನಕಾರಿ ಆಡಳಿತಕ್ಕೆ ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಅಂತರರಾಷ್ಟ್ರೀಯ ಸಮುದಾಯವು ಗಾಝಾದಲ್ಲಿ ನರಮೇಧಕ್ಕೆ ಅವಕಾಶ ನೀಡಿರುವುದು ಇತಿಹಾಸದಲ್ಲಿ ಸಮಗ್ರ ಮಾನವತೆಗೆ ನಾಚಿಕೆಗೇಡಿನ ವಿಷಯವಾಗಿ ದಾಖಲಾಗುವುದು ಮಾತ್ರವಲ್ಲ,ಮಾನವ ಜನಾಂಗಕ್ಕೆ ಒಂದು ತಿರುವಿನ ಘಟ್ಟ ಕೂಡ ಆಗಿದೆ ಎಂದಿರುವ ಪ್ರಿಯಾಂಕಾ,ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ನರಮೇಧಕ್ಕೆ ಜಗತ್ತು ಕುರುಡಾಗಿದೆ ಮತ್ತು ಇಡೀ ರಾಷ್ಟ್ರವು ನೆರವಿಗಾಗಿ ಬೇಡಿಕೊಳ್ಳುತ್ತಿದ್ದರೂ ಯಾರೂ ಮುಂದೆ ಬರುತ್ತಿಲ್ಲ. ಇದರ ವಿರುದ್ಧ ಧ್ವನಿಯೆತ್ತದಿದ್ದರೆ ಪ್ರತಿಯೊಬ್ಬರೂ ಇದಕ್ಕಾಗಿ ಊಹಿಸಲೂ ಸಾಧ್ಯವಿಲ್ಲದ ಬೆಲೆಯನ್ನು ತೆರಬೇಕಾಗುತ್ತದೆ ಎಂದಿದ್ದಾರೆ.