ಉತ್ತರ ಪ್ರದೇಶ | ಜಾಮೀನು ಅರ್ಜಿ ವಿಚಾರದಲ್ಲಿ ನ್ಯಾಯಾಧೀಶರು - ವಕೀಲರ ನಡುವೆ ವಾಗ್ವಾದ ; ಹತೋಟಿಗೆ ತಂದ ಪೊಲೀಸರು
Photo : NDTV
ಗಾಝಿಯಾಬಾದ್ : ನ್ಯಾಯಾಧೀಶರು ಮತ್ತು ವಕೀಲರ ನಡುವಿನ ವಾಗ್ವಾದದ ನಂತರ ಗಾಝಿಯಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎಂದು NDTV ವರದಿ ಮಾಡಿದೆ.
ನ್ಯಾಯಾಧೀಶರ ಕೊಠಡಿಯಲ್ಲಿ ಹೆಚ್ಚಿನ ವಕೀಲರು ಜಮಾಯಿಸಿ ಗದ್ದಲ ಸೃಷ್ಟಿಸಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರನ್ನು ಕರೆಸಲಾಗಿದೆ. ಪೊಲೀಸರು ಕುರ್ಚಿಗಳನ್ನು ಎತ್ತಿ ವಕೀಲರನ್ನು ಕಚೇರಿಯಿಂದ ಹೊರ ಕಳುಹಿಸುವ ದೃಶ್ಯಗಳು ಕಂಡುಬಂದಿವೆ. ಪರಿಸ್ಥಿತಿ ನಿಯಂತ್ರಿಸಲು ಅರೆಸೇನಾ ಪಡೆ ಸಿಬ್ಬಂದಿಗಳನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ ಎಂದು NDTV ವರದಿಯಲ್ಲಿ ಉಲ್ಲೇಖಿಸಿದೆ.
ಈ ವೇಳೆ ಹಲವಾರು ವಕೀಲರು ಗಾಯಗೊಂಡಿದ್ದಾರೆ ಮತ್ತು ಘಟನೆ ಬಗ್ಗೆ ಚರ್ಚಿಸಲು ವಕೀಲರ ಸಂಘವು ಸಭೆಯನ್ನು ಕರೆದಿದೆ ಎಂದು ವರದಿಗಳು ತಿಳಿಸಿವೆ. ನ್ಯಾಯಾಧೀಶರ ಕೊಠಡಿಯಿಂದ ವಕೀಲರನ್ನು ಹೊರ ಹಾಕಿದ ನಂತರ, ವಕೀಲರು ಹೊರಗೆ ಜಮಾಯಿಸಿ ಭದ್ರತಾ ಪಡೆಗಳ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದಾರೆ.
ಜಾಮೀನು ಅರ್ಜಿ ವಿಚಾರದಲ್ಲಿ ನ್ಯಾಯಾಧೀಶರು ಮತ್ತು ವಕೀಲರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.