ಅತ್ಯಾಚಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಬಾಲಕಿ ಹತ್ಯೆ; ಆರೋಪಿ ಬಂಧನ
ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಬಾಲಕಿಯ ಸಂಬಂಧಿಕರು (screengrab/ndtv.com)
ಹೊಸದಿಲ್ಲಿ: ಹದಿಹರೆಯದ ಯುವಕನೊಬ್ಬ ಅತ್ಯಾಚಾರ ಮಾಡುವ ಪ್ರಯತ್ನ ಮಾಡಿದಾಗ ಪ್ರತಿರೋಧ ತೋರಿದ ಎಂಟು ವರ್ಷದ ಬಾಲಕಿ ದೆಹಲಿಯ ಸೇನಾ ಕಂಟೋನ್ಮೆಂಟ್ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಉಸಿರುಗಟ್ಟಿ ಬಾಲಕಿ ಮೃತಪಟ್ಟಿದ್ದು, ಅದೇ ಪ್ರದೇಶದಲ್ಲಿ ವಾಸವಿದ್ದ 19 ವರ್ಷದ ಯುವಕನೊಬ್ಬನನ್ನು ಘಟನೆ ಸಂಬಂಧ ಬಂಧಿಸಲಾಗಿದೆ.
ಎಂಟು ವರ್ಷದ ಮಗು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದು, ಪೋಷಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದರು. ಬೆಳಿಗ್ಗೆ ಬಾಲಕಿಯ ಮೃತದೇಹ ಶಂಕರ್ ವಿಹಾರ ಮಿಲಿಟರಿ ಪ್ರದೇಶದ ಖಾಲಿ ಕಟ್ಟಡವೊಂದರ ಕಬ್ಬಿಣದ ರಾಡ್ ನಲ್ಲಿ ನೇತಾಡುತ್ತಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಯುವಕನ್ನು ಬಂಧಿಸಿದ್ದಾರೆ.
ಅಣ್ಣ ಎಂದು ಕರೆಯುತ್ತಿದ್ದ ಪುಟ್ಟ ಬಾಲಕಿಯನ್ನು ಪುಸಲಾಯಿಸಿ ಅದೇ ಪ್ರದೇಶದಲ್ಲಿದ್ದ ನಿರ್ಜನವಾದ ಮನೆಯೊಂದಕ್ಕೆ ತೆರಳಿ ಬಲಾತ್ಕಾರಕ್ಕೆ ಯತ್ನಿಸಿದ್ದನ್ನು ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಆಕೆ ಪ್ರತಿರೋಧ ತೋರಿದಾಗ ಉಸಿರುಗಟ್ಟಿಸಿ ಸಾಯಿಸಿದ್ದಾಗಿ ತಿಳಿದು ಬಂದಿದೆ.
ಈ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನದಲ್ಲಿ ಆಕೆಯ ಕುತ್ತಿಗೆಗೆ ಸ್ಕಾರ್ಫ್ ಸುತ್ತಿ ನೇತಾಡಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಬಾಲಕಿಯ ಸಂಬಂಧಿಕರು ಆಪಾದಿಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿರುವ ಅವರು, ಮಂಗಳವಾರ ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರು ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.