ಬಿಟಿಎಸ್ ತಾರೆಯರನ್ನು ಭೇಟಿಯಾಗಲು ಅಪಹರಣದ ನಾಟಕವಾಡಿದ ಬಾಲಕಿಯರು!
BTS | File photo
ಮುಂಬೈ : ದಕ್ಷಿಣ ಕೊರಿಯಾದ ಖ್ಯಾತ ಕೆ-ಪಾಪ್ ಬ್ಯಾಂಡ್ ಬಿಟಿಎಸ್ನ ತಾರೆಯರನ್ನು ಭೇಟಿಯಾಗಲು ಹಣ ಹೊಂದಿಸಲು ಕೆಲಸ ಮಾಡಲು ಹೋದ ಮೂವರು ಬಾಲಕಿಯರು ಅಪಹರಣದ ನಾಟಕವಾಡಿರುವಂತಹ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಧಾರಾಶಿವ ಜಿಲ್ಲೆಯ ನಾಲ್ವರು ಬಾಲಕಿಯರು ಈ ನಾಟಕವಾಡಿದವರು. ನಾಲ್ವರ ಪೈಕಿ ಒಬ್ಬಳಿಗೆ 11 ವರ್ಷ, ಮೂವರಿಗೆ 13 ವರ್ಷ ಎಂದು ಗುರುತಿಸಲಾಗಿದೆ. ತಮ್ಮ ನೆಚ್ಚಿನ ಬಿಟಿಎಸ್ ಸದಸ್ಯರನ್ನು ಭೇಟಿ ಮಾಡಲು ಬಾಲಕಿಯರು ದಕ್ಷಿಣ ಕೊರಿಯಾಗೆ ಹೋಗಲು ಯೋಜನೆ ಹಾಕಿಕೊಂಡಿದ್ದರು. ಅದಕ್ಕಾಗಿ ಹಣ ಹೊಂದಿಸಲು ಪುಣೆಗೆ ತೆರಳಿ ಅಲ್ಲಿ ಕೆಲಸ ಮಾಡುವ ಯೋಜನೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಘಟನೆ ಬೆಳಕಿಗೆ ಬಂದದ್ದು ಹೇಗೆ?
ಡಿಸೆಂಬರ್ 27ರಂದು ಒಮೆರ್ಗಾ ತಾಲೂಕಿನಲ್ಲಿ ಮೂವರು ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕರೆ ಬಂದ ನಂಬರ್ ಟ್ರ್ಯಾಕ್ ಮಾಡಿದ್ದಾರೆ. ಅದು ಒಮೆರ್ಗಾದಿಂದ ಪುಣೆಗೆ ತೆರಳುತ್ತಿದ್ದ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಸೇರಿದ್ದು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಳಿಕ ಪೊಲೀಸರು ಮಹಿಳೆಯೊಬ್ಬರ ನೆರವಿನಿಂದ ಮಕ್ಕಳನ್ನು ಬಸ್ನಿಂದ ಕೆಳಗೆಳಳಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರನ್ನು ಪೋಷಕರಿಗೆ ಬಾಲಕಿಯರನ್ನು ಒಪ್ಪಿಸಲಾಗಿದೆ. ಬಾಲಕಿಯರು ದಕ್ಷಿಣ ಕೊರಿಯಾದ ಖ್ಯಾತ ಕೆ-ಪಾಪ್ ಬ್ಯಾಂಡ್ ಬಿಟಿಎಸ್ ಅನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದು, ಅದರಲ್ಲಿನ ತಾರೆಯರನ್ನು ಫಾಲೋ ಮಾಡುತ್ತಿದ್ದರು. ಬಿಟಿಎಸ್ ಬ್ಯಾಂಡ್ ಸದಸ್ಯರನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ಹೋಗುವ ಯೋಜನೆ ಹಾಕಿಕೊಂಡ ಅವರು ಹಣ ಹೊಂದಿಸಲು ಪುಣೆಗೆ ಹೋಗಿ, ಅಲ್ಲಿ ಏನಾದರೂ ಕೆಲಸ ಮಾಡಲು ಯೋಜನೆ ರೂಪಿಸಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.