ಪೂಜೆಗೆ ಅವಕಾಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋದ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ
ತುರ್ತು ವಿಚಾರಣೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್
Photo: livelaw.in
ವಾರಣಾಸಿ : ಹಿಂದೂಗಳಿಗೆ ಜ್ಞಾನವಾಪಿ ಮಸೀದಿಯೆ ನೆಲಮಾಳಿಗೆ 'ವ್ಯಾಸ್ ತೆಹ್ಖಾನಾ'ದಲ್ಲಿ ಪೂಜೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಅವಕಾಶ ಕಲ್ಪಿಸಿರುವುದನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ ಎಂದು livelaw.com ವರದಿ ಮಾಡಿದೆ.
ಅರ್ಜಿಯ ತುರ್ತು ವಿಚಾರಣೆಗೆ ಮಸೀದಿ ಪರ ವಕೀಲ ಎಸ್ ಎಫ್ ಎ ನಖ್ವಿ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಅವರ ಬಳಿ ವಿನಂತಿಸಿದರು. ಅರ್ಜಿಯ ವಿಚಾರಣೆಯನ್ನು ರಿಜಿಸ್ಟ್ರಾರ್ ಅವರು ಕ್ರಮವಾಗಿ ತೆಗೆದುಕೊಂಡರೆ ವಿಳಂಬವಾಗಬಹುದು ಎಂದು ಅವರು ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಅದರಂತೆ ಅವಕಾಶ ಕಲ್ಪಿಸಲಾಗಿದೆ. ಸಧ್ಯದ್ಲಲೇ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವ್ಯಾಸ್ ಜಿ ಕಾ ತೆಹ್ಖಾನಾದಲ್ಲಿ ಪೂಜೆಗೆ ಅವಕಾಶ ನೀಡುವ ಆದೇಶದ ವಿರುದ್ಧ ಮಸೀದಿ ಸಮಿತಿಯ ಮನವಿಯನ್ನು ತುರ್ತಾಗಿ ವಿಚಾರಣೆಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಅಸ್ತಿತ್ವದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಒಳಗೆ ಮುಚ್ಚಿದ ನೆಲಮಾಳಿಗೆ/ನೆಲಮಾಳಿಗೆ/ತಹಖಾನ (ವ್ಯಾಸ್ ಜಿ ಕಾ ತೆಹ್ಖಾನಾ) ಒಳಗೆ ಹಿಂದೂಗಳು ಪೂಜಾ ವಿಧಿಗಳನ್ನು ನಡೆಸಲು 7 ದಿನಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜಿಲ್ಲಾಡಳಿತಕ್ಕೆ ನಿನ್ನೆ ನಿರ್ದೇಶನ ನೀಡಿದ್ದರು. ಈ ಸ್ಥಳದಲ್ಲಿ ಪೂಜೆಯನ್ನು 1993 ರಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.