3ನೇ ದಿನವೂ ಮುಂದುವರಿದ ಜ್ಞಾನವಾಪಿ ಮಸೀದಿ ಸಮೀಕ್ಷೆ
ಜ್ಞಾನವಾಪಿ ಮಸೀದಿ. | Photo : ANI
ವಾರಣಾಸಿ: ಇಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೂರನೇ ದಿನವಾದ ರವಿವಾರವೂ ನಡೆಸಿದೆ. ಈ ನಡುವೆ ಮುಸ್ಲಿಮರ ಗುಂಪು, ಹಿಂದೂ ಧಾರ್ಮಿಕ ಚಿಹ್ನೆಗಳು ಹಾಗೂ ವಸ್ತುಗಳು ಪತ್ತೆಯಾಗಿವೆ ಎಂದು ವದಂತಿ ಹಬ್ಬಿಸಿದರೆ ಸಂಪೂರ್ಣ ಸಮೀಕ್ಷೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಮೀಕ್ಷೆ ಕಾರ್ಯ ರವಿವಾರ ಬೆಳಗ್ಗೆ ಸುಮಾರು 8 ಗಂಟೆಗೆ ಆರಂಭವಾಗಿದೆ ಹಾಗೂ ಸಂಜೆ 5 ಗಂಟೆ ವರೆಗೆ ನಡೆಯಿತು ಎಂದು ಸರಕಾರಿ ನ್ಯಾಯವಾದಿ ರಾಜೇಶ್ ಮಿಶ್ರಾ ತಿಳಿಸಿದ್ದಾರೆ. ಹಿಂದೂ ಗುಂಪನ್ನು ಪ್ರತಿನಿಧಿಸಿದ ನ್ಯಾಯವಾದಿಗಳಲ್ಲಿ ಒಬ್ಬರಾದ ಸುಧೀರ್ ತ್ರಿಪಾಠಿ, ಶನಿವಾರ ನಡೆಸಿದ ಸಮೀಕ್ಷೆ ಕಾರ್ಯದಲ್ಲಿ ಡಿಜಿಪಿಎಸ್ (ಡಿಫರೆನ್ಸಿಯಲ್ ಗ್ಲೋಬಲ್ ಪೊಸಿಸನಿಂಗ್ ಸಿಸ್ಟಮ್), ಇತರ ತಂತ್ರಗಳು ಹಾಗೂ ಯಂತ್ರಗಳನ್ನು ಬಳಸಲಾಗಿದೆ ಎಂದು ಶನಿವಾರ ಹೇಳಿದ್ದಾರೆ. ಈ ಸಮೀಕ್ಷೆಯಿಂದ ಹಿಂದೂ ಗುಂಪು ಇದುವರೆಗೆ ತೃಪ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಂ ಗುಂಪು ಹಾಗೂ ಅವರ ನ್ಯಾಯವಾದಿಗಳು ರವಿವಾರ ಎರಡನೇ ದಿನ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಶುಕ್ರವಾರ ನಡೆದ ಸಮೀಕ್ಷೆಯಲ್ಲಿ ಅವರು ಪಾಲ್ಗೊಂಡಿರಲಿಲ್ಲ’ ಎಂದು ಮಸೀದಿ ನಿರ್ವಹಣಾ ಸಮಿತಿ ಅಂಜುಮಾನ್ ಇಂತೆಝಮಿಯಾ ಸಮಿತಿಯ ಜಂಟಿ ಕಾರ್ಯದರ್ಶಿ ಸೈಯದ್ ಮುಹಮ್ಮದ್ ಯಾಸಿನ್ ರವಿವಾರ ತಿಳಿಸಿದ್ದಾರೆ. ನೆಲಮಾಳಿಗೆ ಸಮೀಕ್ಷೆಯ ಸಂದರ್ಭ ಮೂರ್ತಿ, ತ್ರಿಶೂಲ ಹಾಗೂ ಕಲಶ ಪತ್ತೆಯಾಗಿದೆ ಎಂದು ಶನಿವಾರ ಒಂದು ವರ್ಗದ ಮಾಧ್ಯಮಗಳು ಸುದ್ದಿ ಹಬ್ಬಿಸಿವೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಕೃತ್ಯಗಳು ಮುಂದುವರಿದರೆ ಸಮೀಕ್ಷೆ ಕಾರ್ಯವನ್ನು ಮತ್ತೊಮ್ಮೆ ಬಹಿಷ್ಕರಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.