ಗೋವಾ : ವಿದ್ಯಾರ್ಥಿಗಳನ್ನು ಮಸೀದಿಗೆ ಕರೆದುಕೊಂಡ ಹೋದ ಪ್ರಾಂಶುಪಾಲ ಅಮಾನತು
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದು ದೂರು ನೀಡಿದ ವಿಶ್ವ ಹಿಂದೂ ಪರಿಷತ್
ಪಣಜಿ : 11 ನೇ ತರಗತಿಯ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಯ ಪ್ರಾಂಶುಪಾಲರು ಮಸೀದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಕರೆದುಕೊಂಡು ಹೋಗಿದ್ದು, ಬಳಿಕ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದು ಬಲಪಂಥೀಯ ಸಂಘಟನೆಗಳು ದೂರು ನೀಡಿದ ಬಳಿಕ, ಪ್ರಾಂಶುಪಾಲರನ್ನು ಅಮಾನತ್ತು ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಳೆದ ಶನಿವಾರ ನಡೆದ ಈ ಘಟನೆಯ ಕುರಿತು ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲಾ ಆಡಳಿತ ಮಂಡಳಿಯಿಂದ ವರದಿ ಕೇಳಿದ ಬೆನ್ನಲ್ಲೇ, ಆಡಳಿತ ಮಂಡಳಿ ಪ್ರಾಂಶುಪಾಲರ ಶಂಕರ್ ಗಾಂವ್ಕರ್ ಅವರನ್ನು ಅಮಾನತ್ತು ಮಾಡಿದೆ. ವಿಶ್ವ ಹಿಂದೂ ಪರಿಷತ್ ಸದಸ್ಯರು ರಾಷ್ಟ್ರ ವಿರೋಧಿ ಚಟುಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಾಸ್ಕೋದ ಶಾಲೆಯ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಕ್ರಮವನ್ನು ನಿಷೇಧಿತ ಪಿಎಫ್ಐ ಬೆಂಬಲಿತ ಸಂಘಟನೆ ಆಯೋಜಿಸಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ ಸದಸ್ಯರು, ವಿದ್ಯಾರ್ಥಿಗಳನ್ನು ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ