“ನನಗೆ ಸನಾತನ ವಿರೋಧಿ ಘೋಷಣೆ ಕೂಗಲು ಸಾಧ್ಯವಿಲ್ಲ”: ಕಾಂಗ್ರೆಸ್ ಪಕ್ಷದ ಹುದ್ದೆ, ಸದಸ್ಯತ್ವ ತೊರೆದ ಗೌರವ್ ವಲ್ಲಭ್
Photo: NDTV
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳನ್ನು ಹಾಗೂ ಸದಸ್ಯತ್ವಕ್ಕೆ ಪಕ್ಷದ ವಕ್ತಾರ ಗೌರವ್ ವಲ್ಲಭ್ ಇಂದು ರಾಜೀನಾಮೆ ನೀಡಿದ್ದಾರೆ. ತನಗೆ ಸದಾ ಸನಾತನ ವಿರೋಧಿ ಘೋಷಣೆಗಳನ್ನು ಕೂಗಲು ಹಾಗೂ ಸಂಪತ್ತು ಸೃಷ್ಟಿಕರ್ತರನ್ನು (ವೆಲ್ತ್ ಕ್ರಿಯೇಟರ್ಸ್) ಸದಾ ನಿಂದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಾವು ಬರೆದಿರುವ ರಾಜೀನಾಮೆ ಪತ್ರವನ್ನು ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಅವರು ಪಕ್ಷದ ಪರವಾಗಿ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ ಹಾಗೂ ಪತ್ರಿಕಾಗೋಷ್ಠಿ ನಡೆಸದೆ ಬಹಳ ಸಮಯವಾಗಿತ್ತು.
“ನಾನು ಕಾಂಗ್ರೆಸ್ ಸೇರಿದಾಗ, ಅದು ದೇಶದ ಯುವಜನತೆ ಮತ್ತು ಬುದ್ಧಿವಂತ ಜನರು ಮತ್ತು ಅವರ ಆಲೋಚನೆಗಳನ್ನು ಗೌರವಿಸುವ ಅತ್ಯಂತ ಹಳೆಯ ಪಕ್ಷವೆಂದು ನಂಬಿದ್ದೆ. ಆದರೆ ಹೊಸ ಆಲೋಚನೆಗಳನ್ನು ಹೊಂದಿದ ಯುವಜನತೆಯೊಂದಿಗೆ ಅದಕ್ಕೆ ಸರಿಹೊಂದಲಾಗುತ್ತಿಲ್ಲ ಎಂದು ತಿಳಿಯಿತು,” ಈ ಕಾರಣದಿಂದ ಪಕ್ಷಕ್ಕೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಅವರು ಅಯ್ಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವ ಪಕ್ಷದ ನಿರ್ಧಾರವೂ ತನಗೆ ಅಸಮಾಧಾನ ತಂದಿದೆ ಎಂದಿದ್ದಾರೆ.