ಸರಕಾರಿ ನೇಮಕಾತಿ ಪರೀಕ್ಷೆ | ಅ.27ರಂದು ಅಸ್ಸಾಂನಾದ್ಯಂತ ಮೊಬೈಲ್ ಅಂತರ್ಜಾಲ ಸೇವೆಗಳ ಅಮಾನತು
ಗುವಾಹಟಿ : ರವಿವಾರ (ಅಕ್ಟೋಬರ್ 27) ಸರಕಾರಿ ನೇಮಕಾತಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಂದು ಬೆಳಗ್ಗೆ 8.30ರಿಂದ ಸಂಜೆ 4 ಗಂಟೆವರೆಗೆ ಅಸ್ಸಾಂನಾದ್ಯಂತ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಶುಕ್ರವಾರ ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಅಮಾನತುಗೊಳಿಸುತ್ತಿರುವುದು ಇದು ಮೂರನೆಯ ಬಾರಿಯಾಗಿದೆ.
ರಾಜ್ಯ ಮಟ್ಟದ ನೇಮಕಾತಿ ಆಯೋಗವು ಇಂತಹುದೇ ಪರೀಕ್ಷೆಯನ್ನು ಸೆಪ್ಟೆಂಬರ್ ನಲ್ಲಿ ಹಮ್ಮಿಕೊಂಡಿದ್ದಾಗ ಎರಡು ದಿನಗಳ ಕಾಲ ಮೊಬೈಲ್ ಅಂತರ್ಜಾಲ ಸೇವೆಯನ್ನು ಅಮಾನತುಗೊಳಿಸಲಾಗಿತ್ತು.
ಅಸ್ಸಾಂ ರಾಜ್ಯ ಶಾಲಾ ಶಿಕ್ಷಣ ಮಂಡಳಿಯು ರವಿವಾರದಂದು 4ನೇ ದರ್ಜೆಯ ಹುದ್ದೆಗಳಿಗೆ 28 ಜಿಲ್ಲೆಗಳಲ್ಲಿ ಎರಡು ಪಾಳಿಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಿದೆ.
ಎಚ್ಎಸ್ಎಲ್ಸಿ ಹಂತದ ಹುದ್ದೆಗಳಿಗಾಗಿ ನಡೆಯುತ್ತಿರುವ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಒಟ್ಟಾರೆ 8,27,130 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರೆಲ್ಲ ಮೊದಲ ಪಾಳಿಯಲ್ಲಿ ಬೆಳಗ್ಗೆ 9 ಗಂಟೆಯಿಂದ 11.30ರವರೆಗೆ 1,484 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
8ನೇ ತರಗತಿ ಹಂತದ ಹುದ್ದೆಗಳಿಗಾಗಿ ನಡೆಯುತ್ತಿರುವ ಪರೀಕ್ಷೆಗೆ ಹಾಜರಾಗಲು ಒಟ್ಟು 5,52,002 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರೆಲ್ಲ ಎರಡನೆ ಪಾಳಿಯಲ್ಲಿ ಮಧ್ಯಾಹ್ನ 1.30ರಿಂದ 4 ಗಂಟೆವರೆಗೆ 808 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
“ದುಷ್ಟ ಶಕ್ತಿಗಳು ಮೊಬೈಲ್ ಫೋನ್ ತಂತ್ರಾಂಶಗಳನ್ನು ಬಳಸಿಕೊಂಡು ಅಕ್ರಮವೆಸಗದಂತೆ ಖಾತರಿ ಪಡಿಸಲು ಹಾಗೂ ಸಾರ್ವಜನಿಕರಲ್ಲಿ ಅಪನಂಬಿಕೆಯುಂಟಾಗುವಂತಹ ಪರೀಕ್ಷಾ ನ್ಯೂನತೆಗಳಿರದಂತೆ ಮಾಡಲು ಮೊಬೈಲ್ ಅಂತರ್ಜಾಲ ಸೇವೆಯನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಗೃಹ ಹಾಗೂ ರಾಜಕೀಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ತಿವಾರಿ ಸಹಿ ಮಾಡಿರುವ ಆದೇಶದಲ್ಲಿ ಹೇಳಲಾಗಿದೆ.