ರೈಲ್ವೆ ನಿಲ್ದಾಣಕ್ಕೆ ಐಷಾರಾಮಿ ಕಾರು ಕಳುಹಿಸದ್ದಕ್ಕೆ ರಾಜ್ಯಪಾಲರ ಪುತ್ರನಿಂದ ಹಲ್ಲೆ: ಒಡಿಶಾ ರಾಜಭವನ ಅಧಿಕಾರಿಯ ಆರೋಪ
PC : newindianexpress.com
ಪುರಿ: ಪುರಿ ರೈಲ್ವೆ ನಿಲ್ದಾಣದಿಂದ ಕರೆತರಲು ಐಷಾರಾಮಿ ಕಾರು ಕಳುಹಿಸದ್ದಕ್ಕೆ ರಾಜ್ಯಪಾಲ ರಘುವರ ದಾಸ್ ಅವರ ಪುತ್ರ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಒಡಿಶಾ ರಾಜಭವನದ ಅಧಿಕಾರಿಯೋರ್ವರು ಆರೋಪಿಸಿದ್ದಾರೆ.
ಭುವನೇಶ್ವರದಲ್ಲಿಯ ರಾಜಭವನದಲ್ಲಿ ಸಹಾಯಕ ಸೆಕ್ಷನ್ ಅಧಿಕಾರಿಯಾಗಿರುವ ವೈಕುಂಠ ಪ್ರಧಾನ (47) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಜು.7 ಮತ್ತು 8ರಂದು ಅವರು ಪುರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದ ಹಿನ್ನೆಲೆಯಲ್ಲಿ ಅಲ್ಲಿ ಸಿದ್ಧತೆಗಳ ಉಸ್ತುವಾರಿ ನೋಡಿಕೊಳ್ಳಲು ಜು.5ರಿಂದ ನಿಯೋಜಿಸಲಾಗಿತ್ತು.
ಜು.7ರಂದು ರಾತ್ರಿ ರಾಜ್ಯಪಾಲರ ಪುತ್ರ ಲಲಿತ್ ಕುಮಾರ್ ಮತ್ತು ಇತರ ಐವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಧಾನ ಜು.10ರಂದು ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ.
‘ಜು.7ರಂದು ರಾತ್ರಿ 11:45ರ ಸುಮಾರಿಗೆ ನಾನು ಕಚೇರಿಯಲ್ಲಿ ಕುಳಿತಿದ್ದಾಗ ರಾಜ್ಯಪಾಲರ ಖಾಸಗಿ ಬಾಣಸಿಗ ಬಂದು ಕುಮಾರ ತಕ್ಷಣವೇ ಬರುವಂತೆ ಹೇಳಿದ್ದಾರೆ ಎಂದು ತಿಳಿಸಿದ್ದ. ಕುಮಾರ ನನ್ನನ್ನು ನೋಡಿದ ತಕ್ಷಣ ನಿಂದಿಸಲು ಆರಂಭಿಸಿದ್ದರು,ಅತ್ಯಂತ ಆಕ್ಷೇಪಾರ್ಹ ಭಾಷೆ ಬಳಸಿದ್ದರು. ನಾನು ಅದನ್ನು ಆಕ್ಷೇಪಿಸಿದಾಗ ಅವರು ನನ್ನನ್ನು ಹೊಡೆಯಲು ಆರಂಭಿಸಿದ್ದರು. ನಾನು ಅಲ್ಲಿಂದ ಓಡಿ ಸಂಕೀರ್ಣದ ಹಿಂದೆ ಬಚ್ಚಿಟ್ಟುಕೊಂಡಿದ್ದೆ. ಆದರೆ ಕುಮಾರ ಅವರ ಭದ್ರತಾ ಸಿಬ್ಬಂದಿಗಳು ನನ್ನನ್ನು ಪತ್ತೆ ಹಚ್ಚಿ ಅವರ ಕೋಣೆಗೆ ಎಳೆದೊಯ್ದಿದ್ದರು. ಅಲ್ಲಿ ಕುಮಾರ ಮತ್ತು ಸಹಚರರು ನನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ತಾವು ನನ್ನನ್ನು ಕೊಂದರೆ ಉಳಿಸಲು ಇಲ್ಲಿ ಯಾರೂ ಇಲ್ಲ ಎಂದು ಕುಮಾರ ಹೇಳುತ್ತಲೇ ಇದ್ದರು’ ಎಂದು ಪ್ರಧಾನ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಭುವನೇಶ್ವರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನ ಪತ್ನಿ ಸಯೋಜ್,ಜು.11ರಂದು ನಾನೂ ದೂರು ಸಲ್ಲಿಸಲು ಸೀ ಬೀಚ್ ಪೋಲಿಸ್ ಠಾಣೆಗೆ ತೆರಳಿದ್ದೆ,ಆದರೆ ಅವರು ದೂರನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ನಾವು ಪೋಲಿಸರಿಗೆ ದೂರನ್ನು ಮೇಲ್ ಮಾಡಿದ್ದೇವೆ ’ಎಂದು ತಿಳಿಸಿದರು.
ಪುರಿ ರೈಲ್ವೆ ನಿಲ್ದಾಣದಿಂದ ತನ್ನನ್ನು ಕರೆದೊಯ್ಯಲು ಎರಡು ಐಷಾರಾಮಿ ಕಾರುಗಳನ್ನು ಕಳುಹಿಸದ್ದಕ್ಕೆ ಕುಮಾರ ಪ್ರಧಾನ ಬಗ್ಗೆ ಅಸಮಾಧಾನಗೊಂಡಿದ್ದರು. ತನ್ನ ಶೂಗಳನ್ನು ನೆಕ್ಕುವಂತೆಯೂ ಕುಮಾರ ಪ್ರಧಾನಗೆ ಹೇಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ನನ್ನ ಪತಿ ರಾಷ್ಟ್ರಪತಿಗಳ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು, ರಾಜ್ಯಪಾಲರ ಪುತ್ರನ ಸೇವೆಗಾಗಿ ಅಲ್ಲ’ ಎಂದು ಮಾಧ್ಯಮಗಳಿಗೆ ತಿಳಿಸಿದ ಸಯೋಜ್,ಗುರುವಾರ ತನ್ನ ಪತಿಯನ್ನು ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ತನ್ನ ಪತಿ ಜು.10ರಂದು ರಾಜ್ಯಪಾಲರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ತನ್ನ ಗೋಳನ್ನು ತೋಡಿಕೊಂಡಿದ್ದರು, ಆದರೆ ನಡವಳಿಕೆಯನ್ನು ಬದಲಿಸಿಕೊಳ್ಳುವಂತೆ ಅವರಿಗೆ ಸೂಚಿಸಲಾಗಿತ್ತು ಎಂದರು.
2019ರಲ್ಲಿ ರಾಜಭವನದಲ್ಲಿ ನೇಮಕಕ್ಕೆ ಮುನ್ನ ಪ್ರಧಾನ ಭಾರತೀಯ ವಾಯುಪಡೆಯಲ್ಲಿ 20 ವರ್ಷಗಳ ಸೇವೆ ಸಲ್ಲಿಸಿದ್ದರು.