ಸರಕಾರವು G20 ಗಣ್ಯರಿಂದ ಬಡವರನ್ನು ಮರೆಮಾಚುತ್ತಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | Photo: twitter \ @RahulGandhi
ಹೊಸದಿಲ್ಲಿ: G20 ಶೃಂಗಸಭೆಯ ಹಿನ್ನೆಲೆಯಲ್ಲಿ ಸರಕಾರವು ಕೊಳಗೇರಿಗಳನ್ನು ಮರೆ ಮಾಚುತ್ತಿದೆ ಅಥವಾ ನೆಲಸಮಗೊಳಿಸುತ್ತಿದೆ ಮತ್ತು ಬಿಡಾಡಿ ಪ್ರಾಣಿಗಳನ್ನು ಕೂಡಿ ಹಾಕುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದ್ದು, ‘ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಬಚ್ಚಿಡುವ ಅಗತ್ಯವಿಲ್ಲ’ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಎರಡು ದಿನಗಳ ಶೃಂಗಸಭೆಗೆ ಮನ್ನ ಕೆಲವು ಕೊಳಗೇರಿ ಪ್ರದೇಶಗಳನ್ನು ಹಸಿರು ಶೀಟ್ಗಳಿಂದ ಮುಚ್ಚುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಕಾಂಗ್ರೆಸ್ ‘X’ ನಲ್ಲಿ ಹಂಚಿಕೊಂಡಿದೆ. ಶನಿವಾರ ಇಲ್ಲಿ ಆರಂಭಗೊಂಡಿರುವ ಜಿ20 ಶೃಂಗಸಭೆಯಲ್ಲಿ ವಿಶ್ವದ ಬೃಹತ್ ಆರ್ಥಿಕತೆಗಳ ನಾಯಕರು ಭಾಗವಹಿಸಿದ್ದಾರೆ.
‘ಭಾರತ ಸರಕಾರವು ನಮ್ಮ ಬಡಜನರನ್ನು ಮತ್ತು ಪ್ರಾಣಿಗಳನ್ನು ಬಚ್ಚಿಡುತ್ತಿದೆ. ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮುಚ್ಚಿಡಬೇಕಾದ ಅಗತ್ಯವಿಲ್ಲ’ ಎಂದು ಪ್ರಸ್ತುತ ವಿದೇಶದಲ್ಲಿರುವ ರಾಹುಲ್ X ಪೋಸ್ಟ್ ನಲ್ಲಿ ಹೇಳಿದ್ದಾರೆ.
ಈ ವಿಷಯದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾಗತಿಕ ಸಮಸ್ಯೆಗಳನ್ನು ಪರಸ್ಪರ ಸಹಕಾರದೊಂದಿಗೆ ಎದುರಿಸುವ ಗುರಿಯನ್ನು ಹೊಂದಿರುವ ಜಿ20 ವಿಶ್ವದ ಪ್ರಮುಖ ಆರ್ಥಿಕತೆಗಳ ಫಲದಾಯಕ ಸಮಾವೇಶವಾಗಬೇಕು ಎಂದು ನಿರೀಕ್ಷಿಸಲಾಗಿದೆ. ಅಧ್ಯಕ್ಷ ಪುಟಿನ್ ಅವರು ಸಭೆಯಿಂದ ದೂರವುಳಿದಿರಬಹುದು, ಆದರೆ ಪ್ರಿನ್ಸ್ ಪೊಟೆಮ್ಕಿನ್ (ಮೋದಿ) ಕೊಳಗೇರಿಗಳನ್ನು ಮುಚ್ಚಿ ಅಥವಾ ನೆಲಸಮಗೊಳಿಸಿ ಸಹಸ್ರಾರು ಜನರನ್ನು ನಿರ್ವಸಿತರನ್ನಾಗಿ ಮಾಡುವ ಮೂಲಕ ಪೂರ್ಣ ಪ್ರದರ್ಶನದಲ್ಲಿದ್ದಾರೆ. ಬಿಡಾಡಿ ಪ್ರಾಣಿಗಳನ್ನು ಕ್ರೂರವಾಗಿ ಕೂಡಿ ಹಾಕಲಾಗುತ್ತಿದೆ, ದೌರ್ಜನ್ಯ ನಡೆಸಲಾಗುತ್ತಿದೆ. ಇವೆಲ್ಲ ಕೇವಲ ಪ್ರಧಾನಿಯವರ ವರ್ಚಸ್ಸನ್ನು ಹೆಚ್ಚಿಸಲು ಎಂದು ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಸರಕಾರವು ನಮ್ಮನ್ನು ಕ್ರಿಮಿಗಳು ಎಂದು ಪರಿಗಣಿಸುತ್ತಿದೆ, ನಾವು ಮನುಷ್ಯರಲ್ಲವೇ ’ ಎಂದು ಕೊಳಗೇರಿ ನಿವಾಸಿಯೋರ್ವ ಪ್ರಶ್ನಿಸಿರುವ ವೀಡಿಯೊವನ್ನು X ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಜಿ20ಗೆ ಮುನ್ನ ಮೋದಿ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅವರ ಮನೆಗಳನ್ನು ಪರದೆಗಳಿಂದ ಮರೆ ಮಾಡಿತ್ತು, ಏಕೆಂದರೆ ದೊರೆ ಬಡವರನ್ನು ದ್ವೇಷಿಸುತ್ತಾರೆ ಎಂದು ಹೇಳಿದೆ.
ಬೀದಿನಾಯಿಗಳನ್ನು ಕುತ್ತಿಗೆಯಿಂದ ಹಿಡಿದೆಳೆದು ದೊಣ್ಣೆಗಳಿಂದ ಥಳಿಸಿ ಪಂಜರಗಳಲ್ಲಿ ಎಸೆಯಲಾಗುತ್ತಿದೆ, ಅವುಗಳಿಗೆ ಆಹಾರ ಮತ್ತು ನೀರನ್ನು ನಿರಾಕರಿಸಲಾಗುತ್ತಿದೆ ಮತ್ತು ಅವುಗಳನ್ನು ತೀವ್ರ ಒತ್ತಡ ಮತ್ತು ಭೀತಿಗೊಳಪಡಿಸಲಾಗುತ್ತೆ ಎಂದಿರುವ ಕಾಂಗ್ರೆಸ್, ‘ಇಂತಹ ಭಯಾನಕ ಕೃತ್ಯಗಳ ವಿರುದ್ಧ ನಾವು ಧ್ವನಿಯೆತ್ತುವುದು ಮತ್ತು ಈ ಬಾಯಿಲ್ಲದ ಬಲಿಪಶುಗಳಿಗಾಗಿ ನ್ಯಾಯಕ್ಕಾಗಿ ಅಗ್ರಹಿಸುವುದು ಅಗತ್ಯವಾಗಿದೆ’ ಎಂದು ಹೇಳಿದೆ.