ಕೆಲಸದಲ್ಲಿ ತಾರತಮ್ಯವನ್ನು ದೂರಿದ್ದಕ್ಕೆ ಕೇರಳದ ಬ್ಯಾಂಕ್ ಉದ್ಯೋಗಿ ಗುಜರಾತಿಗೆ ಎತ್ತಂಗಡಿ!

ಸಾಂದರ್ಭಿಕ ಚಿತ್ರ | PC : PTI
ತಿರುವನಂತಪುರ: ಕಳೆದ ಮೂರು ವರ್ಷಗಳಿಂದಲೂ ಇಂಡಿಯನ್ ಓವರ್ಸೀಸ್ ಬ್ಯಾಂಕ್(ಐಒಬಿ)ನ ಎರ್ನಾಕುಲಂ ಶಾಖೆಯಲ್ಲಿ ಸಹಾಯಕ ಮ್ಯಾನೇಜರ್ ಆಗಿದ್ದ ರೋಷನ್(ಹೆಸರು ಬದಲಿಸಲಾಗಿದೆ) ಅವರನ್ನು ಕೆಲಸದಲ್ಲಿ ಜಾತಿ ತಾರತಮ್ಯದ ಬಗ್ಗೆ ದೂರಿದ ಬಳಿಕ ಗುಜರಾತಿಗೆ ವರ್ಗಾಯಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ರೋಷನ್ ಎರ್ನಾಕುಲಂ ಜಿಲ್ಲೆಯ ಮುಳಕುಪಡಂ ನಿವಾಸಿಯಾಗಿದ್ದು, 2013ರಲ್ಲಿ ಐಒಬಿಗೆ ಸೇರಿದ್ದರು. ಎಂಟು ವರ್ಷಗಳ ಕಾಲ ಚೆನ್ನೈನಲ್ಲಿ ಸೇವೆ ಸಲ್ಲಿಸಿದ ಬಳಿಕ ಎರ್ನಾಕುಲಂ ಶಾಖೆಗೆ ವರ್ಗಾವಣೆಗೊಂಡಿದ್ದರು.
ಕಳೆದೊಂದು ವರ್ಷದಿಂದಲೂ ಮೂಲತಃ ಉತ್ತರ ಪ್ರದೇಶ ನಿವಾಸಿಯಾದ ಸಹಾಯಕ ಜನರಲ್ ಮ್ಯಾನೇಜರ್(ಎಜಿಎಂ) ಕಾಶ್ಮೀರ್ ಸಿಂಗ್ ಮತ್ತು ಚೀಫ್ ರೀಜನಲ್ ಮ್ಯಾನೇಜರ್(ಸಿಆರ್ಎಂ) ನಿತೇಶಕುಮಾರ ಸಿನ್ಹಾ ಅವರು ಜಾತಿಯ ಆಧಾರದಲ್ಲಿ ತನಗೆ ಕಿರುಕುಳ ನೀಡಿದ್ದರು. ತಾನು ಸಹಾಯಕ ಮ್ಯಾನೇಜರ್ ಹುದ್ದೆಯಲ್ಲಿದ್ದರೂ ಸಹೋದ್ಯೋಗಿಗಳಿಗೆ ಚಹಾ ಮತ್ತು ತಿಂಡಿ ತಂದು ಕೊಡುವ, ಕಚೇರಿಯಲ್ಲಿನ ಗಿಡಗಳಿಗೆ ನೀರುಣಿಸುವ ಮತ್ತು ಸಿಂಗ್ ಅವರ ವೈಯಕ್ತಿಕ ಕೆಲಸಗಳನ್ನು ತನ್ನಿಂದ ಮಾಡಿಸಲಾಗುತ್ತಿತ್ತು ಎಂದು ರೋಷನ್ ಆರೋಪಿಸಿದ್ದಾರೆ.
ತಾನು ಪೋಲಿಸರಿಗೆ ದೂರು ಸಲ್ಲಿಸಿದ್ದೆ. ಆದರೆ ಅವರು ಎಫ್ಐಆರ್ ನೋಂದಾಯಿಸಲು ವಿಳಂಬಿಸಿದ್ದರು ಮತ್ತು ದೂರನ್ನು ಹಿಂದೆಗೆದುಕೊಳ್ಳುವಂತೆಯೂ ತನಗೆ ಸೂಚಿಸಿದ್ದರು. ಬಳಿಕ ಪೋಲಿಸರು ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರಾದರೂ ಬ್ಯಾಂಕಿನ ಆಂತರಿಕ ತನಿಖೆಯು ರೋಷನ್ ‘ಸುಳ್ಳು ಆರೋಪ’ ಮಾಡಿದ್ದಾರೆ ಎಂದು ಹೇಳಿದ ಬಳಿಕ ಶಿಕ್ಷೆಯ ರೂಪದಲ್ಲಿ ಅವರನ್ನು ಅಹ್ಮದಾಬಾದ್ಗೆ ವರ್ಗಾಯಿಸಲಾಗಿದೆ ಮತ್ತು 15 ವರ್ಷಗಳ ಅವಧಿಗೆ ವೇತನ ಏರಿಕೆಯನ್ನು ತಡೆಹಿಡಿಯಲಾಗಿದೆ.
ಸಿಂಗ್ ಎರ್ನಾಕುಲಂ ಶಾಖೆಗೆ ವರ್ಗಾವಣೆಗೊಂಡು ಬಂದಾಗ ಅವರು ನಗರಕ್ಕೆ ಹೊಸಬರಾಗಿದ್ದರಿಂದ ಆರಂಭದಲ್ಲಿ ಪ್ರತಿಯೊಂದಕ್ಕೂ ತಾನು ಅವರಿಗೆ ನೆರವಾಗಿದ್ದೆ. ಆದರೆ ಅವರು ಶೀಘ್ರವೇ ಅದರ ಲಾಭವನ್ನು ಪಡೆದುಕೊಳ್ಳಲು ಆರಂಭಿಸಿದ್ದರು. ತನ್ನಿಂದ ಮಾಡಿಸುತ್ತಿದ್ದ ಕೆಲಸಗಳಿಗಾಗಿಯೇ ಬ್ಯಾಂಕ್ ಶಾಖೆಯಲ್ಲಿ ಜವಾನರು ಮತ್ತು ಇತರ ಸಿಬ್ಬಂದಿಗಳಿದ್ದರೂ, ಸಿಂಗ್ ಅವರಿಗೆ ಎಂದಿಗೂ ಕೆಲಸಗಳನ್ನು ಹೇಳುತ್ತಿರಲಿಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರೋಷನ್ ತಿಳಿಸಿದರು.
ಈ ಹೆಚ್ಚುವರಿ ಕೆಲಸಗಳು ಸಹಾಯಕ ಮ್ಯಾನೇಜರ್ ಆಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ಅಡ್ಡಿಯಾಗಿದ್ದವು. ಕಚೇರಿ ಅವಧಿಯಲ್ಲಿ ತನ್ನ ನಿಯೋಜಿತ ಕೆಲಸಗಳನ್ನು ಮಾಡಲು ಸಿಂಗ್ ಬಿಡುತ್ತಿರಲಿಲ್ಲ. ಹೀಗಾಗಿ ತನ್ನ ಕೆಲಸಗಳನ್ನು ಪೂರ್ಣಗೊಳಿಸಲು ತಾನು ಕಚೇರಿಯ ಕಾರ್ಯಾವಧಿಯ ನಂತರವೂ ಅಲ್ಲಿಯೇ ಉಳಿದುಕೊಳ್ಳುತ್ತಿದ್ದೆ. ತನ್ನ 11 ವರ್ಷಗಳ ಸೇವಾವಧಿಯಲ್ಲಿ ಎಂದಿಗೂ ಯಾರಿಂದಲೂ ಇಂತಹ ಕಿರುಕುಳವನ್ನು ತಾನು ಎದುರಿಸಿರಲಿಲ್ಲ ಎಂದು ಅವರು ಹೇಳಿದರು.
ತನಗಾಗುತ್ತಿರುವ ಕಿರುಕುಳದ ಬಗ್ಗೆ ರೋಷನ್ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿಕೊಂಡಾಗ ಪರಿಹಾರದ ಬದಲು ಇನ್ನೂ ಹೆಚ್ಚಿನ ತೊಂದರೆಯನ್ನು ಅನುಭವಿಸುವಂತಾಗಿತ್ತು. ಸಿನ್ಹಾರನ್ನು ಭೇಟಿಯಾಗಿ ತನ್ನ ಗೋಳು ತೋಡಿಕೊಂಡಾಗ, ‘ನಿಮ್ಮ ಜಾತಿಯ ಜನರು ಬ್ಯಾಂಕ್ ಉದ್ಯೋಗಕ್ಕೆ ಸೂಕ್ತರಲ್ಲ. ಸಿಂಗ್ ನಿಮಗೆ ನೀಡುತ್ತಿರುವ ಕೆಲಸಗಳಿಗೇ ನೀವು ಯೋಗ್ಯರು’ ಎಂದು ಹೇಳುವ ಮೂಲಕ ಅವಮಾನಿಸಿದ್ದರು ಎಂದು ರೋಷನ್ ಆರೋಪಿಸಿದರು.
ಸಿಂಗ್ ಆಗಾಗ್ಗೆ ತನಗೆ ಹಿಂದಿಯಲ್ಲಿ ಜಾತಿನಿಂದನೆ ಮಾಡುತ್ತಿದ್ದರು, ಸಿನ್ಹಾರ ಎದುರಿನಲ್ಲೇ ಸಿಂಗ್ ನಿಂದಿಸುತ್ತಿದ್ದರೂ ಅವರು ಅದನ್ನು ತಡೆಯುತ್ತಿರಲಿಲ್ಲ. ಬದಲಿಗೆ ಸಿಂಗ್ ಏನು ಹೇಳುತ್ತಾರೋ ಅದನ್ನು ಮಾಡುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದರು. ತನ್ನ ಸಹೋದ್ಯೋಗಿಗಳೂ ತನ್ನ ಬೆಂಬಲಕ್ಕೆ ನಿಂತಿರಲಿಲ್ಲ ಎಂದು ಅವರು ಹೇಳಿದರು.
ಕೊನೆಗೂ ಡಿ.23ರಂದು ಎರ್ನಾಕುಲಂ ಸೆಂಟ್ರಲ್ ಪೋಲಿಸರು ಸಿಂಗ್ ಮತ್ತು ಸಿನ್ಹಾ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ಸಿಂಗ್ ಅವರನ್ನು ಚೆನ್ನೈನ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿತ್ತು.ಈ ವರ್ಗಾವಣೆಯು ಯಾವುದೇ ಶಿಸ್ತುಕ್ರಮದ ಭಾಗವಾಗಿರಲಿಲ್ಲ ಎಂದು ರೋಷನ್ ಪತ್ನಿ ರೋಹಿಣಿ ತಿಳಿಸಿದರು.
ಸೌಜನ್ಯ: thenewsminute.com