ಗುಜರಾತ್ | ನಕಲಿ ಸರಕಾರಿ ಕಚೇರಿ, ಟೋಲ್ ಪ್ಲಾಝಾದ ಬಳಿಕ ನಕಲಿ ಆಸ್ಪತ್ರೆ ಪತ್ತೆ
ಸಾಂದರ್ಭಿಕ ಚಿತ್ರ (PTI)
ಅಹ್ಮದಾಬಾದ್: ನಕಲಿ ಸರಕಾರಿ ಕಚೇರಿ ಹಾಗೂ ನಕಲಿ ಟೋಲ್ ಪ್ಲಾಝಾ ಪತ್ತೆಯಾದ ಬಳಿಕ ಈಗ ಗುಜರಾತ್ನ ಅಹ್ಮದಾಬಾದ್ ನಲ್ಲಿ ನಕಲಿ ಆಸ್ಪತ್ರೆ ಪತ್ತೆಯಾಗಿದೆ.
ಬಾಲಕಿಯೊಬ್ಬಳ ಸಾವಿನ ನಂತರ ಈ ನಕಲಿ ಆಸ್ಪತ್ರೆ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ.
ಅಹ್ಮದಾಬಾದ್ ಜಿಲ್ಲೆಯ ಮುಖ್ಯ ಜಿಲ್ಲಾ ಆರೋಗ್ಯಾಧಿಕಾರಿ (ಸಿಡಿಎಚ್ಒ) ನೇತೃತ್ವದ ತಂಡ ಬಾವ್ಲಾ ತಾಲೂಕಿನ ಕೇರಾಲಾ ಗ್ರಾಮದಲ್ಲಿರುವ ‘‘ಅನನ್ಯಾ ಮಲ್ಟಿ ಸ್ಪೆಷಾಲಿಟಿ’’ ಎಂದು ಗುರುತಿಸಲಾದ ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ನಕಲಿ ವೈದ್ಯ ನಡೆಸುತ್ತಿದ್ದ. ಈ ಆಸ್ಪತ್ರೆ ಬೇರೊಬ್ಬ ವೈದ್ಯರ ಹೆಸರಲ್ಲಿ ನೋಂದಣಿಯಾಗಿದೆ. ಆದುದರಿಂದ ಈ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ, ಮೂತ್ರರೋಗ ಚಿಕಿತ್ಸಾ ವಿಭಾಗ, ಚರ್ಮರೋಗ ಚಿಕಿತ್ಸಾ ವಿಭಾಗ ಹಾಗೂ ಇತರ ಚಿಕಿತ್ಸಾ ವಿಭಾಗಗಳು ಸೇರಿದಂತೆ 10 ವಿಭಾಗಗಳು 24 ಗಂಟೆಗಳ ಕಾಲವೂ ಕಾರ್ಯಾಚರಿಸುತ್ತಿವೆ ಎಂದು ಆಸ್ಪತ್ರೆ ಪ್ರತಿಪಾದಿಸಿದೆ.
ಈ ಆಸ್ಪತ್ರೆಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟ ಬಳಿಕ, ಆಕೆಯ ಹೆತ್ತವರು ಇಲ್ಲಿನ ವ್ಯವಸ್ಥೆ ಕುರಿತು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅನಂತರ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಆಸ್ಪತ್ರೆಯಲ್ಲಿ ದಾಖಲಿಸುವ ಸಂದರ್ಭ ನಮ್ಮ ಪುತ್ರಿಯ ಸ್ಥಿತಿ ಗಂಭೀರವಾಗಿರಲಿಲ್ಲ. ಆಸ್ಪತ್ರೆಯಲ್ಲಿ ಆಕೆಯ ಸ್ಥಿತಿ ಚಿಂತಾಜನಕವಾಯಿತು. ಮೆಹುಲ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ನಕಲಿ ವೈದ್ಯನೊಬ್ಬ ನಮ್ಮ ಪುತ್ರಿಯನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ ಎಂದು ಬಾಲಕಿಯ ಕುಟುಂಬ ಹೇಳಿದೆ.
ಪುನರಾವರ್ತಿತ ಮನವಿಯ ಹೊರತಾಗಿಯೂ ಆಸ್ಪತ್ರೆಯ ಆಡಳಿತ ಮಂಡಳಿ ನಮಗೆ ಪುತ್ರಿಯ ವೈದ್ಯಕೀಯ ವರದಿ ನೀಡಿಲ್ಲ. ಅಲ್ಲದೆ, 1.5 ಲಕ್ಷ ರೂ. ಶುಲ್ಕ ವಿಧಿಸಿದೆ ಎಂದು ಕುಟುಂಬ ತಿಳಿಸಿದೆ.
ಈ ಬಗ್ಗೆ ಪತ್ರಿಕೆಯೊಂದು ಅಹ್ಮದಾಬಾದ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಓಂ ಪ್ರಕಾಶ್ ಜಾಟ್ ಅವರನ್ನು ಸಂಪರ್ಕಿಸಿದಾಗ ಅವರು, ಪೊಲೀಸರು ಬಾಲಕಿಯ ಸಾವಿನ ಕುರಿತು ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದುವರೆಗೆ ಆಸ್ಪತ್ರೆಯ ವಿರುದ್ಧ ಅಥವಾ ನಕಲಿ ವೈದ್ಯನ ವಿರುದ್ಧ ಯಾರೊಬ್ಬರೂ ಪೊಲೀಸರಿಗೆ ದೂರು ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ.