ಗುಜರಾತ್: ನಕಲಿ ಸರ್ಕಾರಿ ಕಚೇರಿಗಳ ನಂತರ ನಕಲಿ ಟೋಲ್ ಪ್ಲಾಝಾ!
ಸಾಂದರ್ಭಿಕ ಚಿತ್ರ. | PTI
ಮಾರ್ಬಿ (ಗುಜರಾತ್): ಮಾರ್ಬಿ ಜಿಲ್ಲೆಯಲ್ಲಿರುವ ಅಸಲಿ ಟೋಲ್ ಪ್ಲಾಝಾವನ್ನು ತಪ್ಪಿಸಿ, ಅದು ವಿಧಿಸುವ ನೈಜ ರಸ್ತೆ ಸುಂಕಕಿಂತಲೂ ಕಡಿಮೆ ದರದ ಸುಂಕ ವಿಧಿಸಿ ಖಾಸಗಿ ರಸ್ತೆಯ ಮೂಲಕ ಸಂಚರಿಸಲು ನಕಲಿ ಟೋಲ್ ಪ್ಲಾಝಾ ಮೂಲಕ ಅವಕಾಶ ಮಾಡಿಕೊಡುತ್ತಿದ್ದ ಆರೋಪದಡಿ ಗುಜರಾತ್ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು thehindu.com ವರದಿ ಮಾಡಿದೆ.
ಕೆಲವು ವಾರಗಳ ಹಿಂದಷ್ಟೆ ನಕಲಿ ಸರ್ಕಾರಿ ಕಚೇರಿಗಳನ್ನು ನಡೆಸುತ್ತಾ, ಮಧ್ಯ ಗುಜರಾತ್ ನ ಆದಿವಾಸಿ ಪ್ರದೇಶಗಳಲ್ಲಿ ಸುಮಾರು ರೂ. 18.5 ಕೋಟಿ ಅನುದಾನವನ್ನು ಕಬಳಿಸಿದ್ದ ವಂಚಕ ವ್ಯಕ್ತಿಯೊಬ್ಬನ ಜಾಲವನ್ನು ಪೊಲೀಸರು ಭೇದಿಸಿದ್ದ ಬೆನ್ನಿಗೇ ನಕಲಿ ಟೋಲ್ ಪ್ಲಾಝಾ ಮೂಲಕ ರೂ. 75 ಕೋಟಿಗೂ ಹೆಚ್ಚು ಮೊತ್ತವನ್ನು ವಾಹನಗಳಿಂದ ವಸೂಲಿ ಮಾಡಿರುವ ಈ ಪ್ರಕರಣವು ಬೆಳಕಿಗೆ ಬಂದಿರುವುದರಿಂದ ಸರ್ಕಾರವು ಮುಜುಗರಕ್ಕೀಡಾಗಿದೆ.
ಸುಸಜ್ಜಿತ ನಕಲಿ ಟೋಲ್ ಪ್ಲಾಝಾ ಕುರಿತು ಮಾಧ್ಯಮಗಳಲ್ಲಿ ವರದಿಯಾದ ನಂತರ ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಈ ಸಂಬಂಧ ಸೆರಾಮಿಕ್ ಕಾರ್ಖಾನೆಯ ಮಾಲಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವ್ಯಕ್ತಿಯು ಸೌರಾಷ್ಟ್ರ ಪ್ರಾಂತ್ಯದಲ್ಲಿ ಪಾಟಿದಾರ್ ಸಮುದಾಯದ ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಎಂದು ಹೇಳಲಾಗಿದೆ.
ಎಫ್ಐಆರ್ ನಲ್ಲಿ ಪೊಲೀಸರು ಸೆರಾಮಿಕ್ ಕಾರ್ಖಾನೆಯ ಮಾಲಕ ಅಮರೀಶ್ ಪಟೇಲ್ ಹಾಗೂ ಆತನ ಸಹಚರರಾದ ರವಿರಾಜ್ ಸಿನ್ಹ ಝಾಲಾ, ಹರ್ವಿಜಯ್ ಸಿನ್ಹ್ ಝಾಲ, ಧರ್ಮೇಂದ್ರ ಸಿನ್ಹ್ ಝಾಲಾ, ಯುವರಾಜ್ ಸಿನ್ಹ್ ಝಾಲಾ ಹಾಗೂ ಓರ್ವ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.