ಗುಜರಾತ್: ಸಿಂಹದ ಬಾಯಿಯಿಂದ ತನ್ನ ಹಸುವನ್ನು ರಕ್ಷಿಸಿದ ಮಾಲಕ; ವಿಡಿಯೊ ವೈರಲ್
ವೆರಾವಲ್, ಜೂ.30: ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸಿಂಹದ ಹಿಡಿತದಿಂದ ರೈತನೊಬ್ಬ ತನ್ನ ಹಸುವನ್ನು ರಕ್ಷಿಸುತ್ತಿರುವ ವಿಡಿಯೊ ಶುಕ್ರವಾರ ವೈರಲ್ ಆಗಿದೆ.
ಸೋಮನಾಥ್ ಜಿಲ್ಲೆಯ ಕೊಡಿನಾರ್ ತಾಲೂಕಿನ ಅಲಿದಾರ್ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಬಿಜೆಪಿ ಮುಖಂಡ, ಕೆಶೋಡ್ ಪುರಸಭೆ ಸದಸ್ಯ ವಿವೇಕ್ ಕೊಟಾಡಿಯ ಅವರು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಗಿರ್ ವನ್ಯಜೀವಿ ಅಭಯಾರಣ್ಯದ ಭಾಗದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಏಷ್ಯಾಟಿಕ್ ಸಿಂಹಗಳು ಗಣನೀಯ ಸಂಖ್ಯೆಯಲ್ಲಿದೆ.
ಹಸು ತನ್ನನ್ನು ಹಿಡಿದ ಸಿಂಹದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೇಳೆ ಸ್ಥಳಕ್ಕಾಗಮಿಸಿದ ಹಸುವಿನ ಮಾಲೀಕ ಕೂಗಾಡುವ ಮೂಲಕ ಸಿಂಹವನ್ನು ಓಡಿಸಲು ಯತ್ನಿಸಿದ್ದಾರೆ. ಅದಾಗ್ಯೂ, ಸಿಂಹ ತನ್ನ ಬೇಟೆಯನ್ನು ಬಿಡಲು ನಿರಾಕರಿಸಿದ್ದರಿಂದ, ಮಾಲಿಕ ಕಲ್ಲನ್ನು ಎತ್ತಿ ಸಿಂಹವನ್ನು ಓಡಿಸಿದ್ದಾರೆ.
ಈ ಘಟನೆ ಗುರುವಾರ ಅಲಿದರ್ ಗ್ರಾಮದ ಹೊರವಲಯದಲ್ಲಿ ನಡೆದಿದೆ ಎಂದು ವಲಯ ಅರಣ್ಯಾಧಿಕಾರಿ ಅಶೋಕ್ ಅಮೀನ್ ತಿಳಿಸಿದ್ದಾರೆ.
"ಸಿಂಹಗಳು ಅಲಿದರ್ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ಶಾಶ್ವತ ನೆಲೆಯನ್ನಾಗಿ ಮಾಡಿಕೊಂಡಿವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.