ನ್ಯಾಯಾಲಯದ ಕಲಾಪದ ತಪ್ಪು ವರದಿ ಪ್ರಕಟ| ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ಪ್ರೆಸ್, ದಿವ್ಯಾ ಭಾಸ್ಕರ್ ಪತ್ರಿಕೆಗಳಿಗೆ ಮತ್ತೆ ಕ್ಷಮೆ ಕೋರುವಂತೆ ಗುಜರಾತ್ ಹೈಕೋರ್ಟ್ ಸೂಚನೆ

ಗುಜರಾತ್ ಹೈಕೋರ್ಟ್ (PTI)
ಹೊಸದಿಲ್ಲಿ: ಕೋರ್ಟ್ ಕಲಾಪಗಳನ್ನು ತಪ್ಪಾಗಿ ವರದಿ ಮಾಡಿದ್ದಕ್ಕಾಗಿ ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ದಿವ್ಯಾ ಭಾಸ್ಕರ್ ಪ್ರಕಟಿಸಿದ ಕ್ಷಮೆಯಾಚನೆಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸುನಿತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರಿದ್ದ ಪೀಠವು ಆಗಸ್ಟ್ 23 ರಂದು ಮೂರು ಪತ್ರಿಕೆಗಳು ಪ್ರಕಟಿಸಿದ ಕ್ಷಮೆಯಾಚನೆಗಳನ್ನು ತಿರಸ್ಕರಿಸಿದೆ. ಹೈಕೋರ್ಟ್ ಆಗಸ್ಟ್ 22 ರಂದು ಆದೇಶಿಸಿದಂತೆ ದಪ್ಪ ಅಕ್ಷರಗಳಲ್ಲಿ ಅಥವಾ ಪ್ರಾಮುಖ್ಯತೆ ನೀಡಿ ಕ್ಷಮೆಯಾಚನೆ ಪ್ರಕಟಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳು "ನೀವು ಕ್ಷಮೆಯಾಚನೆಯನ್ನು ಏಕೆ ದಪ್ಪ ಅಕ್ಷರದಲ್ಲಿ ಪ್ರಕಟಿಸಿಲ್ಲ?" ಪತ್ರಿಕೆಗಳನ್ನು ಪ್ರತಿನಿಧಿಸುವ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ಕ್ಷಮಾಪಣೆಗಳು ದಪ್ಪ ಅಕ್ಷರಗಳಲ್ಲಿವೆ ಎಂದು ವಕೀಲರು ಸ್ಪಷ್ಟಪಡಿಸಿದರು.
"ಪ್ರಕಟಿತ ಅಕ್ಷರಗಳು ಸಣ್ಣ ಗಾತ್ರದಲ್ಲಿವೆ. ಯಾರು ಅದನ್ನು ಓದಲು ಸಾಧ್ಯವಿಲ್ಲ. ಕ್ಷಮಾಪಣೆ ಯಾವುದಕ್ಕೆ ಸಂಬಂಧಿಸಿದೆ ಎಂದು ನೀವು ಸಂಪೂರ್ಣ ಶೀರ್ಷಿಕೆಯನ್ನು ನೀಡಬೇಕಾಗಿತ್ತು. ಇದು ಯಾರಿಗೂ ಅರ್ಥವಾಗದ ಕ್ಷಮೆಯಾಚನೆ. ಹೀಗಾಗಿ ನ್ಯಾಯಾಲಯದ ಮುಂದೆ ಮೂರು ಪತ್ರಿಕೆಗಳು ಸಲ್ಲಿಸಿದ್ದ ಕ್ಷಮಾಪಣೆ ಅಫಿಡವಿಟ್ಗಳನ್ನು ನ್ಯಾಯಾಲಯ ತಿರಸ್ಕರಿಸಿದೆ", ಎಂದು ಮುಖ್ಯ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೂರು ದಿನಪತ್ರಿಕೆಗಳಿಗೆ ಹೊಸ ಕ್ಷಮಾಪಣೆಯನ್ನು ಪ್ರಕಟಿಸಲು ನ್ಯಾಯಾಲಯ ಮೂರು ದಿನಗಳ ಕಾಲಾವಕಾಶ ನೀಡಿದೆ. ಆದೇಶದಂತೆ ಪತ್ರಿಕೆಗಳು ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ ವಿವರವಾದ ಕ್ಷಮೆಯಾಚನೆ ಪ್ರಕಟಿಸಬೇಕಿದೆ. ಕ್ಷಮೆಯಾಚನೆಯ ಜೊತೆ ಬೇರೆ ಯಾವುದೇ ಸುದ್ದಿ ಇರಬಾರದು ಎಂದು ನ್ಯಾಯಾಲಯ ತಾಕೀತು ಮಾಡಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
ಆಗಸ್ಟ್ 13, 2024 ಮೂರು ಪತ್ರಿಕೆಗಳಲ್ಲಿ ಹೈಕೋರ್ಟ್ ಕಲಾಪವನ್ನು ತಪ್ಪಾಗಿ ವರದಿ ಮಾಡಲಾಗಿತ್ತು. "ಸುಳ್ಳು ಮತ್ತು ತಿರುಚಿದ ನಿರೂಪಣೆ" ನೀಡಿದ್ದಕ್ಕಾಗಿ ವಿವರಣೆಯನ್ನು ಕೋರಿ ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ದಿವ್ಯಾ ಭಾಸ್ಕರ್ಗೆ ನ್ಯಾಯಾಲಯವು ಆಗಸ್ಟ್ 13 ರಂದು ನೋಟಿಸ್ ನೀಡಿತ್ತು.
ಬಳಿಕ ಪತ್ರಿಕೆಗಳು ನ್ಯಾಯಾಲಯಕ್ಕೆ ಸಲ್ಲಿಸಿದ ತಮ್ಮ ಅಫಿಡವಿಟ್ಗಳಲ್ಲಿ ಕ್ಷಮೆಯಾಚಿಸಿದವು. ಆದರೆ ನ್ಯಾಯಾಲಯವು ಅದನ್ನು ತಿರಸ್ಕರಿಸಿ, ನ್ಯಾಯಾಲಯದ ಕಲಾಪ ವರದಿ ಮಾಡುವಲ್ಲಿ ವರದಿಗಾರ ಮತ್ತು ಸಂಪಾದಕರಿಂದ ತಪ್ಪಾಗಿದೆ ಎಂದು ಸ್ಪಷ್ಟವಾಗಿ ಪ್ರತಿಬಿಂಬಿಸುವ ರೀತಿಯಲ್ಲಿ ಆಯಾ ಪತ್ರಿಕೆಗಳಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸಲು ಆಗಸ್ಟ್ 22 ರಂದು ಆದೇಶವನ್ನು ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಆಗಸ್ಟ್ 23 ರಂದು ಪತ್ರಿಕೆಗಳು ಕ್ಷಮೆಯಾಚನೆ ಪ್ರಕಟಿಸಿದವು. ಸೋಮವಾರ ಈ ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ಪ್ರಕಟವಾದ ಕ್ಷಮೆಯಾಚನೆಗಳು ತುಂಬಾ ಚಿಕ್ಕದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತು.
ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಪರವಾಗಿ ಹಿರಿಯ ವಕೀಲ ದೇವಾಂಗ್ ನನ್ವತಿ ಹಾಜರಾಗಿದ್ದರು. ಇಂಡಿಯನ್ ಎಕ್ಸ್ಪ್ರೆಸ್ ಪರವಾಗಿ ವಕೀಲ ಎಸ್ಪಿ ಮಜ್ಮುದಾರ್ ಮತ್ತು ಟೈಮ್ಸ್ ಆಫ್ ಇಂಡಿಯಾವನ್ನು ಪರ ವಕೀಲ ಗರಿಮಾ ಮಲ್ಹೋತ್ರಾ ವಾದ ಮಂಡಿಸಿದರು. ದಿವ್ಯಾ ಭಾಸ್ಕರ್ ಪರ ವಕೀಲ ಮೌಲಿಕ್ ಜಿ ನಾನಾವತಿ ವಾದ ಮಂಡಿಸಿದರು.
ಕೃಪೆ: barandbench.com