ಗುಜರಾತ್: ಆರೋಪಿ ಪೊಲೀಸರಿಂದ ಪರಿಹಾರ ನಿರಾಕರಿಸಿದ ಸಂತ್ರಸ್ತರು
ಐವರು ಮುಸ್ಲಿಮ್ ವ್ಯಕ್ತಿಗಳನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ್ದ ಪೊಲೀಸರು
Photo : thewire.in
ಹೊಸದಿಲ್ಲಿ: ಕಳೆದ ವರ್ಷದ ಅಕ್ಟೋಬರ್ನಲ್ಲಿ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಪೊಲೀಸರಿಂದ ಸಾರ್ವಜನಿಕವಾಗಿ ಥಳಿಸಲ್ಪಟ್ಟಿದ್ದ ಮುಸ್ಲಿಮ್ ವ್ಯಕ್ತಿಗಳು ನಾಲ್ವರು ಆರೋಪಿ ಪೋಲಿಸರಿಂದ ಪರಿಹಾರವನ್ನು ಸ್ವೀಕರಿಸಲು ತಾವು ನಿರಾಕರಿಸಿದ್ದೇವೆ ಎಂದು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನವರಾತ್ರಿ ಪ್ರಯುಕ್ತ ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ನಡೆಯುತ್ತಿದ್ದ ಗರ್ಬಾ ಕಾರ್ಯಕ್ರಮದತ್ತ ಕಲ್ಲುಗಳನ್ನು ತೂರಿದ್ದ ಆರೋಪದಲ್ಲಿ ಕಳೆದ ವರ್ಷದ ಅ.4ರಂದು ಬಂಧಿಸಲ್ಪಟ್ಟಿದ್ದ ಐವರು ಮುಸ್ಲಿಮ್ ವ್ಯಕ್ತಿಗಳನ್ನು ಪೊಲೀಸರು ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಕರಣವು ಈ ತಿಂಗಳ ಆರಂಭದಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವನ್ನು ತಲುಪಿದಾಗ ಅದು ಡಿ.ಕೆ.ಬಸು ವಿರುದ್ಧ ಪಶ್ಚಿಮ ಬಂಗಾಳ ವಿರುದ್ಧ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪಗಳನ್ನು ರೂಪಿಸಿತ್ತು. ಸದ್ರಿ ಪ್ರಕರಣವು ಬಂಧನಗಳ ಸಂದರ್ಭದಲ್ಲಿ ಪೊಲೀಸರ ನಡವಳಿಕೆಗಾಗಿ ನಿಯಮಗಳನ್ನು ವಿಧಿಸಿತ್ತು.
ಜನರ ಪೃಷ್ಠಗಳಿಗೆ ಥಳಿಸುವುದು ಕಸ್ಟಡಿ ಚಿತ್ರಹಿಂಸೆಯಾಗುವುದಿಲ್ಲ ಎಂದು ಪೊಲಿಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ತಮ್ಮ ವಿರುದ್ಧ ರೂಪಿಸಲಾಗಿರುವ ಆರೋಪಗಳು ತಮ್ಮ ವೃತ್ತಿಪರ ದಾಖಲೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ,ಹೀಗಾಗಿ ಪ್ರಾಯಶ್ಚಿತ್ತವಾಗಿ ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸಲು ತಮಗೆ ಅನುಮತಿ ನೀಡುವಂತೆ ಆರೋಪಿಗಳಾದ ಇನ್ಸ್ಪೆಕ್ಟರ್ ಎ.ವಿ.ಪರಮಾರ,ಪಿಎಸ್ಐ ಡಿ.ಬಿ.ಕುಮಾವತ್,ಹೆಡ್ ಕಾನ್ಸ್ಟೇಬಲ್ ಕೆ.ಎಲ್.ದಾಭಿ ಮತ್ತು ಕಾನ್ಸ್ಟೇಬಲ್ ರಾಜು ದಾಭಿ ನ್ಯಾಯಾಲಯವನ್ನು ಆಗ್ರಹಿಸಿದ್ದರು.
‘ನಾವು ಸಂತ್ರಸ್ತರ ಪರ ಹಿರಿಯ ವಕೀಲ ಐ.ಎಚ್.ಸೈಯದ್ ಅವರೊಂದಿಗೆ ಸಭೆಯನ್ನು ನಡೆಸಿದ್ದು,ಕೆಲವು ಅರ್ಜಿದಾರರು ಉಪಸ್ಥಿತರಿದ್ದರು. ಆದರೆ ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ತಮ್ಮ ಕುಟುಂಬ ಅಥವಾ ಸಮುದಾಯದ ಸದಸ್ಯರ ಜೊತೆ ಮಾತನಾಡಿದ ಬಳಿಕ ಸಂತ್ರಸ್ತರು ಯಾವುದೇ ರಾಜಿ ಮತ್ತು ಪರಿಹಾರವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಆರೋಪಿ ಪೊಲೀಸರ ಪರ ಹಿರಿಯ ವಕೀಲರಾದ ಪ್ರಕಾಶ ಜಾನಿ ಸೋಮವಾರ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣವು ಇತ್ಯರ್ಥಗೊಂಡಿಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಾಲಯವು, ಅ.19ರಂದು ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿತು.