ಪಾಕ್ ಗೂಢಚಾರಿಗೆ ಕೋಸ್ಟ್ ಗಾರ್ಡ್ ನೌಕೆಗಳ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಗುಜರಾತ್ ನಿವಾಸಿ ಪಂಕಜ್ ಕೋಟಿಯಾ ಬಂಧನ
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್ : ಪಾಕಿಸ್ತಾನಿ ಏಜೆಂಟ್ ಗೆ ಭಾರತೀಯ ಕೋಸ್ಟ್ ಗಾರ್ಡ್ ನೌಕೆಗಳ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಪೋರ್ ಬಂದರ್ ನಿವಾಸಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹದಳ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಕಜ್ ಕೋಟಿಯಾ ಬಂಧಿತ ಆರೋಪಿ. ಈತ ಪಾಕಿಸ್ತಾನದ ಏಜೆಂಟ್ ಗೆ ಮಾಹಿತಿ ರವಾನೆ ಮಾಡಿದ್ದಾನೆ. ಏಜೆಂಟ್, ತಾನು ಮುಂಬೈ ಮೂಲದ ಮಹಿಳೆ ʼರಿಯಾʼ ಎಂದು ಪರಿಚಯಿಸಿಕೊಂಡಿದ್ದಳು ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಕೆ ಸಿದ್ಧಾರ್ಥ್ ಹೇಳಿದ್ದಾರೆ.
ಜೆಟ್ಟಿಯಲ್ಲಿ ಕಾರ್ಮಿಕನಾಗಿದ್ದ ಪಂಕಜ್ ಕೋಟಿಯಾನನ್ನು ಫೇಸ್ ಬುಕ್ ನಲ್ಲಿ ಎಂಟು ತಿಂಗಳ ಹಿಂದೆ 'ರಿಯಾ' ಪರಿಚಯಿಸಿಕೊಂಡಿದ್ದು, ಆ ಬಳಿಕ ಅವರಿಬ್ಬರೂ ಸಂಪರ್ಕದಲ್ಲಿದ್ದರು. ನಾನು ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಮುಂಬೈನಲ್ಲಿ ನೆಲೆಸಿದ್ದೇನೆ ಎಂದು 'ರಿಯಾ' ಕೋಟಿಯಾಗೆ ಹೇಳಿದ್ದಳು ಎಂದು ಅಧಿಕಾರಿ ಹೇಳಿದ್ದಾರೆ.
ಐಸಿಜಿ ಹಡಗುಗಳು ಮತ್ತು ಜೆಟ್ಟಿಯ ಸ್ಥಳ ಮತ್ತು ಇತರ ವಿವರಗಳ ಕುರಿತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ವಾಟ್ಸಾಪ್ ಸಂಖ್ಯೆಯು ಪಾಕಿಸ್ತಾನಕ್ಕೆ ಸೇರಿದೆ. ಕಳೆದ ಎಂಟು ತಿಂಗಳಿನಿಂದ ಪಂಕಜ್ ಕೋಟಿಯಾಗೆ ಮಾಹಿತಿ ನೀಡಿದ್ದಕ್ಕೆ ಯುಪಿಐ ಮೂಲಕ 26,000 ರೂ.ಗಳನ್ನು ಕಂತುಗಳಲ್ಲಿ ಪಾವತಿಸಲಾಗಿದೆ ಎಂದು ಎಸ್ಪಿ ಸಿದ್ಧಾರ್ಥ್ ಹೇಳಿದ್ದಾರೆ.