ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥ ಮಾಡಿಕೊಳ್ಳಬೇಕು : ಸಂಸದ ಇಮ್ರಾನ್ ಪ್ರತಾಪ್ ಗಢಿ ವಿರುದ್ಧದ ಪ್ರಕರಣದಲ್ಲಿ ಗುಜರಾತ್ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ

Photo | indianexpress
ಹೊಸದಿಲ್ಲಿ : ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಗಢಿ ಅವರ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಿದ್ದಕ್ಕೆ ಗುಜರಾತ್ ಪೊಲೀಸರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಂವಿಧಾನ ಅಸ್ತಿತ್ವಕ್ಕೆ ಬಂದು 75 ವರ್ಷಗಳು ಕಳೆದಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೊಲೀಸರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಇಮ್ರಾನ್ ಪ್ರತಾಪ್ ಗಢಿ ಇನ್ಸ್ಟಾಗ್ರಾಮ್ನಲ್ಲಿ ʼಏ ಖೂನ್ ಕೆ ಪ್ಯಾಸೆ ಬಾತ್ ಸುನೋʼ(ae khoon ke pyase baat suno) ಎಂಬ ಕವಿತೆಯನ್ನು ಉಲ್ಲೇಖಿಸಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಈ ಕುರಿತು ಎಫ್ಐಆರ್ ದಾಖಲಿಸಿದ್ದಕ್ಕಾಗಿ ಗುಜರಾತ್ ಪೊಲೀಸರನ್ನು ಟೀಕಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದೆ.
ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಕಳೆದಿವೆ. ಪೊಲೀಸರು ಈಗಲೇ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದು ಎಫ್ಐಆರ್ಗೆ ಆಕ್ಷೇಪಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಗುಜರಾತ್ನ ಜಾಮ್ನಗರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೀಡಿಯೋವನ್ನು ಪೋಸ್ಟ್ ಮಾಡಿದ ನಂತರ ಇಮ್ರಾನ್ ಪ್ರತಾಪ್ ಗಢಿ ವಿರುದ್ಧ 2024ರ ಜನವರಿ 3ರಂದು ದ್ವೇಷವನ್ನು ಉತ್ತೇಜಿಸುವ ಮತ್ತು ರಾಷ್ಟ್ರೀಯ ಏಕತೆಗೆ ಧಕ್ಕೆ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಎಫ್ಐಆರ್ ರದ್ದುಗೊಳಿಸುವಂತೆ ಇಮ್ರಾನ್ ಪ್ರತಾಪ್ ಗಢಿ ಈ ಮೊದಲು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಪೀಠವು ಟೀಕಿಸಿದೆ.