ಗುಜರಾತ್ | ದಲಿತರಿಂದ ನೇರವಾಗಿ ಕೈಯ್ಯಲ್ಲಿ ದೇಣಿಗೆ ಪಡೆಯಲು ನಿರಾಕರಣೆ; ದೇವಾಲಯ ಸಮಿತಿಯ ಇಬ್ಬರ ವಿರುದ್ಧ ಎಫ್ಐಆರ್

ಸಾಂದರ್ಭಿಕ ಚಿತ್ರ (freepik)
ಅಹಮದಾಬಾದ್: ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕಾಗಿ ದಲಿತ ಸಮುದಾಯದ ದೇಣಿಗೆ ಪಡೆಯಲು ನಿರಾಕರಿಸಿದ ಆರೋಪದ ಮೇಲೆ ಗುಜರಾತ್ ನ ಭಾರತ-ಪಾಕಿಸ್ತಾನ ಗಡಿಯ ಸಮೀಪದಲ್ಲಿರುವ ಸುಯಿಗಮ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯ ಸಮಿತಿಯ ಇಬ್ಬರು ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಜಾತಿ ತಾರತಮ್ಯದ ಆರೋಪದ ಮೇಲೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್ಸಿಎಸ್ಸಿ) ನೋಟಿಸ್ ನೀಡಿದ ಕೆಲವು ದಿನಗಳ ನಂತರ ಬನಸ್ಕಂತ ಜಿಲ್ಲಾ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ದಲಿತರ ಕೈಯಿಂದ ನೇರವಾಗಿ ದೇಣಿಗೆ ಪಡೆಯಲು ನಿರಾಕರಿಸಿದ್ದರು ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಫೆಬ್ರವರಿ 17 ರಂದು ದಾಖಲಾಗಿರುವ ಎಫ್ಐಆರ್ನಲ್ಲಿ, ಫೆಬ್ರವರಿ 8 ರಿಂದ 10 ರ ನಡುವೆ, ಸುಯಿಗಮ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಪುರ ಗ್ರಾಮದ ಸಮೀಪವಿರುವ ಕಲ್ಯಾಣೇಶ್ವರ ಮಹಾದೇವ್ ಮತ್ತು ರಾಮಚಂದ್ರ ಪರಿವಾರ್ ಮತ್ತು ಗೋಗಾ ಮಹಾರಾಜ್ನಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದಿತ್ತು. ಈ ಸಮಾರಂಭಕ್ಕೆ ದಲಿತ ಸಮುದಾಯ ದೇಣಿಗೆ ನೀಡುವುದನ್ನು ಸಮಿತಿ ಸದಸ್ಯರು ವಿರೋಧಿಸಿದ್ದರು ಎನ್ನಲಾಗಿದೆ. ಒಂದು ವೇಳೆ ದೇಣಿಗೆ ನೀಡುವುದಿದ್ದರೆ ಅದನ್ನು ನೇರವಾಗಿ ಕೈಯ್ಯಲ್ಲಿ ನೀಡದೇ ದೇಣಿಗೆ ಪೆಟ್ಟಿಗೆಗೆ ಹಾಕುವಂತೆ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ.
ಸುಯಿಗಮ್ ಪೊಲೀಸ್ ಠಾಣೆಯ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಹರಿಭಾಯಿ ಎಂ ಪಟೇಲ್ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ, ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಸಮಿತಿಯ ಸದಸ್ಯರಾದ ಬಾಲಾಭಾಯಿ ಈಶ್ವರಭಾಯಿ ದೈಯಾ ಮತ್ತು ಅಮರತ್ಭಾಯ್ ಪರ್ಖಾಭಾಯ್ ಗಮೋಟ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.