ಬಿಜೆಪಿ ಶಾಸಕರು ಸದನದಲ್ಲಿ ಆರೋಪಿ ಎಂಬಂತೆ ಗುರಿಯಾಗಿಸುತ್ತಾರೆ : ಶಾಸಕ ಇಮ್ರಾನ್ ಖೇಡಾವಾಲಾ
ವಿಧಾನಸಭೆಯಲ್ಲಿ ಸಚಿವರ ಹೇಳಿಕೆಗೆ ಗುಜರಾತ್ನ ಏಕೈಕ ಮುಸ್ಲಿಂ ಶಾಸಕನಿಂದ ಆಕ್ಷೇಪ

Imran Khedawala (Facebook)
ಗಾಂಧಿನಗರ : ಗುಜರಾತ್ ವಿಧಾನಸಭೆಯ ಏಕೈಕ ಮುಸ್ಲಿಂ ಶಾಸಕ ಇಮ್ರಾನ್ ಖೇಡಾವಾಲಾ, ಬಿಜೆಪಿ ಶಾಸಕರು ಸಮುದಾಯಕ್ಕೆ ಸಂಬಂಧಿಸಿದ ವಿಚಾರಗಳು ಬಂದಾಗ ಸದನದಲ್ಲಿ ನನ್ನನ್ನು ʼಆರೋಪಿʼ ಎಂಬಂತೆ ಗುರಿಯಾಗಿಸುತ್ತಾರೆ ಎಂದು ಹೇಳಿದ್ದಾರೆ.
ಗುಜರಾತ್ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಬಿಸಿ ಬಿಸಿ ಚರ್ಚೆ ನಡೆದಿದೆ. ಧಾರ್ಮಿಕ ಸ್ಥಳಗಳ ಹೆಚ್ಚಿನ ಅತಿಕ್ರಮಣಗಳನ್ನು ʼನಿರ್ದಿಷ್ಟ ಸಮುದಾಯದವರುʼಮಾಡಿದ್ದಾರೆ ಎಂದು ಬಿಜೆಪಿ ಸಚಿವ ಜಗದೀಶ್ ವಿಶ್ವಕರ್ಮ ಸದನದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಇಮ್ರಾನ್ ಖೇಡಾವಾಲಾ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಸಚಿವರು ತಮ್ಮ ಸಮುದಾಯವನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದರು.
ಸಂದರ್ಶನವೊಂದರಲ್ಲಿ ಮಾತನಾಡಿದ ಶಾಸಕ ಇಮ್ರಾನ್ ಖೇಡಾವಾಲಾ, ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಒಳಗೊಂಡಿರುವ ಯಾವುದೇ ವಿಷಯದಲ್ಲಿ ಬಿಜೆಪಿ ಶಾಸಕರು ನನ್ನನ್ನು ಆರೋಪಿಯನ್ನಾಗಿ ಚಿತ್ರೀಕರಿಸುತ್ತಿದ್ದಾರೆ. ಸದನದಲ್ಲಿ ಜಗದೀಶ್ ವಿಶ್ವಕರ್ಮ ಅವರು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿದ ರೀತಿ ನೋಡಿದಾಗ ನಾನು ಎದ್ದುನಿಂತು ಅದಕ್ಕೆ ಆಕ್ಷೇಪಿಸಿ ಒಂದು ಸಮುದಾಯವನ್ನು ಗುರಿಯಾಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಗುಜರಾತ್ 6.5 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಪ್ರತಿಯೋರ್ವ ವ್ಯಕ್ತಿಗೂ ಅವರವರ ನಂಬಿಕೆಗಳಿವೆ. ಸಚಿವರಾಗಿರುವ ನೀವು ವಿಧಾನಸೌಧದಲ್ಲಿ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ, ಇಡೀ ಗುಜರಾತ್ ನಿಮ್ಮನ್ನು ಗಮನಿಸುತ್ತಿದೆ ಎಂದು ಹೇಳಿದರು.
ಅಧಿವೇಶನದಲ್ಲಿ ನನ್ನ ಮೈಕ್ರೊಫೋನ್ ಆಫ್ ಆಗಿತ್ತು. ಅಧಿಕೃತವಾಗಿ ಮಾತನಾಡಲು ನನಗೆ ಅವಕಾಶ ನೀಡಬೇಕಾಗಿತ್ತು. ಆದರೆ, ನನಗೆ ಅವಕಾಶ ನೀಡಲಿಲ್ಲ. ಆದ್ದರಿಂದ, ನಾನು ಜೋರಾಗಿ ಮಾತನಾಡಿದೆ. 2002ರಿಂದ ಗುಜರಾತ್ನಲ್ಲಿ ಯಾವುದೇ ಕರ್ಫ್ಯೂ ಅಥವಾ ಗಲಭೆಗಳು ನಡೆದಿಲ್ಲ ಎಂದು ವಿಶ್ವಕರ್ಮ ಹೇಳಿದರು. ಆದರೆ, ಸರಕಾರ ಸೂರತ್, ರಾಜ್ಕೋಟ್, ಅಹ್ಮದಾಬಾದ್ ಮತ್ತು ವಡೋದರಾದ ಇತರ ಪ್ರದೇಶಗಳಲ್ಲಿ Disturbed Areas Actನ್ನು ಏಕೆ ಹೇರುತ್ತಿದೆ ಎಂಬುದನ್ನು ಹೇಳಬೇಕು. ಇವುಗಳಿಗೆ ಸಚಿವರು ಉತ್ತರಿಸಲು ಸಾಧ್ಯವಾಗಲಿಲ್ಲ. ಅವರಿಗೆ ಒಂದೇ ಒಂದು ಉದ್ದೇಶವಿತ್ತು. ಅದು ಮುಸ್ಲಿಮರನ್ನು ಗುರಿಯಾಗಿಸುವುದಾಗಿತ್ತು ಎಂದು ಹೇಳಿದರು.
ಇತರ ಕಾಂಗ್ರೆಸ್ ಶಾಸಕರು ನಿಮಗೆ ಬೆಂಬಲ ನೀಡಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ನಾವು ಕೇವಲ 12 ಮಂದಿ ಶಾಸಕರಿದ್ದೇವೆ. ಸಚಿವರು ಸದನದಲ್ಲಿ ಉತ್ತರಿಸುತ್ತಿದ್ದಾಗ ಐದರಿಂದ ಆರು ಮಂದಿ ಕಾಂಗ್ರೆಸ್ ಶಾಸಕರು ಹಾಜರಿದ್ದರು. ಅವರೆಲ್ಲರೂ ನನ್ನನ್ನು ಬೆಂಬಲಿಸಿದರು. ನನಗೆ ಮಾತನಾಡಲು ಅವಕಾಶ ನೀಡಿದ್ದರೆ ಅಧಿಕೃತವಾಗಿ ಬೆಂಬಲ ನೀಡುತ್ತಿದ್ದರು. ಅಂದು ಬೆಳಿಗ್ಗೆ ನಮ್ಮ ನಾಲ್ವರು ಶಾಸಕರನ್ನು ಅಮಾನತು ಮಾಡಲಾಗಿತ್ತು. ಸದನದಲ್ಲಿರುತ್ತಿದ್ದರೆ ಅವರೂ ಕೂಡ ನನ್ನನ್ನು ಬೆಂಬಲಿಸುತ್ತಿದ್ದರು ಎಂದು ಹೇಳಿದರು.
ನಮ್ಮ ಶಾಸಕರ ಸಂಖ್ಯೆ ಕಡಿಮೆ ಇರುವುದರಿಂದ ಸದನದಲ್ಲಿ ಮಾತನಾಡಲು ನಮಗೆ ಸಿಗುವ ಅವಧಿ ಕಡಿಮೆಯಾಗಿದೆ. ನನಗೆ ಮಾತನಾಡಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಸದನದಲ್ಲಿ ಮಾತನಾಡುತ್ತೇನೆ ಮತ್ತು ಜಗದೀಶ್ ವಿಶ್ವಕರ್ಮ ಅವರಿಂದ ಉತ್ತರ ಕೇಳುತ್ತೇನೆ ಎಂದು ಹೇಳಿದರು.
ನಾವು ಯಾವಾಗಲೂ ಗುಜರಾತ್ನಲ್ಲಿ ಶಾಂತಿಯ ಬಗ್ಗೆ ಮಾತನಾಡುತ್ತೇವೆ. ಅಹ್ಮದಾಬಾದ್ನಲ್ಲಿ ಪ್ರತಿ ವರ್ಷ ಜಗನ್ನಾಥ ರಥಯಾತ್ರೆ ಶಾಂತಿಯುತವಾಗಿ ನಡೆಸಲ್ಪಡುತ್ತದೆ. ನಾವು ಹಿಂದೂ-ಮುಸ್ಲಿಂ ಎಂಬ ರಾಜಕೀಯ ಮಾಡುವುದಿಲ್ಲ. ನಾವು ಅಭಿವೃದ್ಧಿಯ ಬಗ್ಗೆ ಮಾತನಾಡಲು ಬಯಸುತ್ತೇವೆ. ಬಿಜೆಪಿ ಆಡಳಿತದಲ್ಲಿ ಒಡೆದು ಆಳುವ ರಾಜಕೀಯ ನಡೆಯುತ್ತಿದೆ. ಸರಕಾರ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಈ ಹಿಂದೆಯೂ ಲವ್ ಜಿಹಾದ್ ಕುರಿತ ಚರ್ಚೆಯ ಸಂದರ್ಭದಲ್ಲಿ ನಿಮ್ಮ ಹೆಸರನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಇಮ್ರಾನ್ ಖೇಡಾವಾಲಾ, ʼಗುಜರಾತ್ ವಿಧಾನಸಭೆಯಲ್ಲಿ ನಾನು ಏಕೈಕ ಮುಸ್ಲಿಂ ಶಾಸಕ. ನನ್ನನ್ನು ನಿರ್ದಿಷ್ಟವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಂದಾಗ, ಅವರು ನನ್ನನ್ನು ಆರೋಪಿಯಂತೆ ಗುರಿಯಾಗಿಸುತ್ತಾರೆ. ನನಗೆ ನಿಜವಾಗಿಯೂ ನೋವಾಗಿದೆʼ ಎಂದು ಹೇಳಿದರು.
ಸಚಿವ ಜಗದೀಶ್ ವಿಶ್ವಕರ್ಮ ಸದನದಲ್ಲಿ ಕ್ಷಮೆ ಕೇಳಬೇಕೆಂದು ನಾನು ಆಗ್ರಹಿಸಿದೆ. ನಾನು ಮಾತನಾಡಲು ನಿಂತಾಗಲೆಲ್ಲಾ ನಾನು ಮುಸ್ಲಿಂ ಶಾಸಕ ಎಂಬ ನಿಲುವು ಅವರ ಮನಸ್ಸಿನಲ್ಲಿದೆ. ನಾನು ಚುನಾಯಿತ ಪ್ರತಿನಿಧಿ, ಹಿಂದೂಗಳು ಮತ್ತು ಮುಸ್ಲಿಮರು ನನಗೆ ಮತ ಹಾಕಿದ್ದಾರೆ. ನಾನು ಪ್ರತಿನಿಧಿಸುವ ಜಮಾಲ್ಪುರ್ ಖಾಡಿಯಾದಲ್ಲಿ 60% ಮುಸ್ಲಿಮರು ಮತ್ತು 40% ಹಿಂದೂಗಳಿದ್ದಾರೆ. ನಾನು ಹಿಂದೂ-ಮುಸ್ಲಿಂ ರಾಜಕೀಯದಲ್ಲಿ ತೊಡಗುವುದಿಲ್ಲ. ನಾನು ಸಂವಿಧಾನವನ್ನು ಅನುಸರಿಸುತ್ತೇನೆ ಮತ್ತು ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಗುಜರಾತ್ನಲ್ಲಿ ಮುಸ್ಲಿಮರ ಸ್ಥಿತಿ ಚೆನ್ನಾಗಿಲ್ಲ. ಎಲ್ಲರೂ ಒಗ್ಗೂಡಿ ಅರ್ಹರನ್ನು ಮಾತ್ರ ಆಯ್ಕೆ ಮಾಡಬೇಕು, ಇದರಿಂದ ವಿಧಾನಸಭೆಯ ಒಳಗೆ ಮತ್ತು ಹೊರಗೆ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೇಳಿದರು. ಸರಕಾರ ವ್ಯವಸ್ಥೆಯಲ್ಲಿ ನಂಬಿಕೆ ಮೂಡಿಸಬೇಕು. ಬಿಜೆಪಿಯ ಸಚಿವರು, ಸಂಸದರು ಬೆಂಕಿ ಹಚ್ಚುವ ಭಾಷಣ ಮಾಡಿದರೆ ಮುಸ್ಲಿಮರಿಗೆ ನೋವಾಗುತ್ತದೆ. ಇದು ನಮ್ಮ ದೇಶ, ನಾವು ಈ ಮಣ್ಣಿನಲ್ಲೇ ಕೊನೆಯುಸಿರೆಳೆಯುತ್ತೇವೆ ಎಂದು ಹೇಳಿದರು.