ವಿಚ್ಛೇದನ ನೀಡಿ ಮರು ವಿವಾಹವಾದ ಡಾ. ಹಾದಿಯಾ; ಪುತ್ರಿ ಕಾಣೆಯಾಗಿದ್ದಾಳೆ ಎಂದು ಹೈಕೋರ್ಟ್ ಮೆಟ್ಟಿಲೇರಿದ ಆಕೆಯ ತಂದೆ
Photo: PTI
ಕೋಝಿಕ್ಕೋಡ್: 2016ರಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿ, ಮುಸ್ಲಿಂ ವ್ಯಕ್ತಿಯೊಬ್ಬನನ್ನು ವರಿಸಿದ್ದಾಗ ಕೇರಳದಲ್ಲಿ 'ಲವ್ ಜಿಹಾದ್' ವಿವಾದ ಸೃಷ್ಟಿಯಾಗಿತ್ತು. ಈಗ ಡಾ. ಹಾದಿಯಾ, ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿ, ಮತ್ತೊಮ್ಮೆ ಮುಸ್ಲಿಂ ವ್ಯಕ್ತಿಯೊಬ್ಬನನ್ನು ವಿವಾಹವಾಗಿದ್ದಾರೆ ಎಂದು onmamorama.com ವರದಿ ಮಾಡಿದೆ.
ಈ ಬಾರಿಯೂ ತನ್ನ ಪುತ್ರಿ ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದಾಳೆ ಎಂದು ಕೊಟ್ಟಾಯಂ ಜಿಲ್ಲೆಯ ವೈಕಂ ನಿವಾಸಿ ಹಾಗೂ ಡಾ. ಹಾದಿಯಾರ ತಂದೆ ಕೆ.ಎಂ.ಅಶೋಕನ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರು ತಮ್ಮ ಪುತ್ರಿಯನ್ನು ಪತ್ತೆ ಹಚ್ಚಿಕೊಡಬೇಕು ಎಂದು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ತಮ್ಮ ತಂದೆಯ ಆರೋಪವನ್ನು ಅಲ್ಲಗಳೆದಿರುವ ಡಾ. ಹಾದಿಯಾ (ಈ ಹಿಂದೆ ಅಖಿಲಾ ಅಶೋಕ್), ನನ್ನ ತಂದೆ ಆರ್ಎಸ್ಎಸ್ನ ಕೊಳಕು ಆಟವನ್ನು ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆದರೆ, ಹಾದಿಯಾರ ಆರೋಪವನ್ನು ನಿರಾಕರಿಸಿರುವ ಅಶೋಕನ್, "ಆಕೆ ಏನು ಹೇಳಬೇಕೊ ಅದನ್ನು ನ್ಯಾಯಾಲಯದ ಎದುರು ಹೇಳಲಿ. ಆಕೆ ನನ್ನ ಪುತ್ರಿಯಾಗಿದ್ದು, ಆಕೆ ಸುರಕ್ಷಿತವಾಗಿ ಮತ್ತು ಜೀವಂತವಾಗಿ ಇರಬೇಕು ಎಂಬುದಷ್ಟೇ ನನ್ನ ಬಯಕೆ" ಎಂದು onmanorama.comಗೆ ಹೇಳಿದ್ದಾರೆ.
ಹೋಮಿಯೋಪತಿ ವೈದ್ಯೆಯಾದ ಡಾ. ಹಾದಿಯಾ, 2016ರಲ್ಲಿ ಕೊಯಂಬತ್ತೂರು ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಶಫೀನ್ ಜಹಾನ್ ಎಂಬ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಆಗ ಅವರಿಗೆ 25 ವರ್ಷ ವಯಸ್ಸಾಗಿತ್ತು.
ಆಗಲೂ ಶಫೀನ್ ಜಹಾನ್ಗೆ ತೀವ್ರವಾದಿ ಸಂಘಟನೆ ಪಿಎಫ್ಐನೊಂದಿಗೆ ಸಂಪರ್ಕವಿದ್ದು, ತನ್ನ ಪುತ್ರಿಯನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿ, ಡಾ. ಹಾದಿಯಾದ ತಂದೆ ಅಶೋಕನ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, ಆಕೆಯನ್ನು ಐಸಿಸ್ಗೆ ಸೇರ್ಪಡೆ ಮಾಡಲು ಸಿರಿಯಾಗೆ ಕಳ್ಳ ಸಾಗಣೆ ಮಾಡಬಹುದು ಎಂದೂ ಅವರು ಆರೋಪಿಸಿದ್ದರು.
ಆದರೆ, ಡಾ. ಹಾದಿಯಾ ತಮ್ಮ ತಂದೆಯ ಆರೋಪವನ್ನು ಅಲ್ಲಗಳೆದಿದ್ದರು.