ಕಾಂಗ್ರೆಸ್, ಬಿಜೆಪಿಯ ಅರ್ಧದಷ್ಟು ಅಭ್ಯರ್ಥಿಗಳು ಕುಬೇರರು; ಇಲ್ಲಿದೆ ಸ್ವಾರಸ್ಯಕರ ಮಾಹಿತಿ..
ಹೊಸದಿಲ್ಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಏಳು ಹಂತಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಣಕ್ಕೆ ಇಳಿಸಿರುವ 768 ಅಭ್ಯರ್ಥಿಗಳ ಪೈಕಿ ಶೇಕಡ 50ಕ್ಕಿಂತ ಹೆಚ್ಚು ಮಂದಿ 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಶೇಕಡ 27ಕ್ಕಿಂತ ಹೆಚ್ಚು ಮಂದಿ ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದ್ದಾರೆ ಎನ್ನುವುದು ಲಾಭರಹಿತ ಸಂಸ್ಥೆಯೊಂದು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಪ್ರಜಾತಂತ್ರ ಫೌಂಡೇಷನ್ ಎಂಬ ಸಂಸ್ಥೆ ಎರಡೂ ಪಕ್ಷಗಳ ಅಭ್ಯರ್ಥಿಗಳ ಹಣಕಾಸು ಸ್ಥಿತಿ ಹಾಗೂ ಕುಟುಂಬ ರಾಜಕಾರಣದ ಹಿನ್ನೆಲೆಯ ಅಧ್ಯಯನ ನಡೆಸಿತ್ತು. ರಾಜಕೀಯ ಹಿನ್ನೆಲೆಯ ಹೊರತಾಗಿ ಅಭ್ಯರ್ಥಿಗಳ ಆಯ್ಕೆಗೆ ಸಾಂಸ್ಥಿಕ ರಾಜಕಾರಣ (ಶೇಕಡ 15.4), ಸ್ಥಳೀಯ ರಾಜಕಾರಣ (12.2%) ಮತ್ತು ರಾಜಕೀಯ ಶಾಸ್ತ್ರದ ವಿದ್ಯಾರ್ಥಿ (9.5%) ಎನ್ನುವುದು ಮಾನದಂಡಗಳಾಗಿವೆ.
"ರಾಜಕಾರಣದಲ್ಲಿ ಕುಟುಂಬದ ಹಿನ್ನೆಲೆ ಇರುವ ಶೇಕಡ 27.6ರಷ್ಟು ಅಭ್ಯರ್ಥಿಗಳ ಪೈಕಿ 71.2% ಮಂದಿ ಎರಡನೇ ತಲೆಮಾರಿನ ರಾಜಕಾರಣಿಗಳು. ಹಾಲಿ ರಾಜಕಾರಣಿಗಳ ಮಗ, ಮಗಳು, ಅಳಿಯ ಅಥವಾ ಸೊಸೆ. ಉಳಿದ ಶೇಕಡ 25ರಷ್ಟು ಮಂದಿ ಮೊದಲ ಪೀಳಿಗೆಯ ರಾಜಕಾರಣಿಗಳು. ಅಂದರೆ ಹಾಲಿ ರಾಜಕಾರಿಣಿಗಳ ಒಡಹುಟ್ಟಿದವರು ಅಥವಾ ಪತಿ/ಪತ್ನಿ. ಕುಟುಂಬ ಹಿನ್ನೆಲೆಯ ಶೇಕಡ 3ರಷ್ಟು ಅಭ್ಯರ್ಥಿಗಳು ಹಲವು ತಲೆಮಾರುಗಳಿಂದ ರಾಜಕಾರಣದಲ್ಲಿ ಇರುವವರು ಎನ್ನುವ ಅಂಶವನ್ನು ಅಧ್ಯಯನ ಬಹಿರಂಗಪಡಿಸಿದೆ.
ಕರ್ನಾಟಕ, ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ ಕುಟುಂಬ ರಾಜಕಾರಣ ಅಧಿಕ ಎನ್ನುವ ಅಂಶವನ್ನೂ ಅಧ್ಯಯನ ಕಂಡುಕೊಂಡಿದೆ. ಚಿಕ್ಕರಾಜ್ಯಗಳ ಪೈಕಿ ಹರ್ಯಾಣದಲ್ಲಿ ಈ ಪ್ರವೃತ್ತಿ ಹೆಚ್ಚು.
ಈ ವರದಿಯ ಪ್ರಕಾರ ಎರಡೂ ಪಕ್ಷಗಳು ಶೇಕಡ 13.4ರಷ್ಟು ಸ್ಥಾನಗಳನ್ನು ಮಾತ್ರ ಮಹಿಳಾ ಅಭ್ಯರ್ಥಿಗಳಿಗೆ ನೀಡಿವೆ. ಇವರಲ್ಲಿ ಅರ್ಧದಷ್ಟು ಮಂದಿ ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿರುವವರು.
ಈ ಅಧ್ಯಯನದಲ್ಲಿ ಅಭ್ಯರ್ಥಿಗಳ ಅಫಿಡವಿಟ್ ನಿಂದ 10 ಮಾಹಿತಿಗಳನ್ನು ಮಾನದಂಡವಾಗಿ ಪಡೆಯಲಾಗಿದೆ. ಶೇಕಡ 81ರಷ್ಟು ಅಭ್ಯರ್ಥಿಗಳು ಒಂದು ಕೋಟಿಗಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಪರಾಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ ಶೇಕಡ 38.8ರಷ್ಟಿದೆ.