ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಪ್ರಕರಣ | ಟೆಹ್ರಾನ್ ನಲ್ಲಿನ IRGಯ ಅತಿಥಿ ಗೃಹದಲ್ಲಿ ತಿಂಗಳುಗಳ ಮೊದಲೇ ಬಾಂಬ್ ಇಟ್ಟಿದ್ದ ಮೊಸಾದ್ : ವರದಿ
PC : NDTV
ಟೆಹ್ರಾನ್: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ತಂಗಿದ್ದ ಟೆಹ್ರಾನ್ ಅತಿಥಿ ಗೃಹಕ್ಕೆ ದೂರ ನಿಯಂತ್ರಿತವಾಗಿ ಸ್ಫೋಟಿಸಬಲ್ಲ ಸ್ಫೋಟಕ ಸಾಧನವನ್ನು ಕಳ್ಳ ಸಾಗಣೆ ಮಾಡುವ ಮೂಲಕ ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ಅಮೆರಿಕ ಮತ್ತು ಇರಾನ್ ಮೂಲಗಳನ್ನು ಉಲ್ಲೇಖಿಸಿ ಗುರುವಾರ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದಕ್ಕೂ ಮುನ್ನ, ಹನಿಯೆಹ್ ಅನ್ನು ಕ್ಷಿಪಣಿ ದಾಳಿ ಮೂಲಕ ಹತ್ಯೆಗೈಯ್ಯಲಾಗಿದೆ ಎಂದು ಶಂಕಿಸಲಾಗಿತ್ತು.
ಖತರ್ ನಲ್ಲಿರುವ ಹಮಾಸ್ ನ ರಾಜಕೀಯ ಘಟಕದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್, ಮಂಗಳವಾರ ಆಯೋಜನೆಗೊಂಡಿದ್ದ ಇರಾನ್ ನ ನೂತನ ಅಧ್ಯಕ್ಷ ಮಸೌದ್ ಪೆಝೆಷ್ಕಿಯನ್ ಅವರ ಪ್ರಮಾಣ ವಚನದಲ್ಲಿ ಭಾಗವಹಿಸಲು ಟೆಹರಾನ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇರಾನ್ ನ ನೂತನ ಅಧ್ಯಕ್ಷರನ್ನು ಆಲಂಗಿಸಿದ್ದ ಹನಿಯೆಹ್, ಅವರೊಂದಿಗೆ ವಿಜಯದ ಸಂಕೇತವನ್ನು ತೋರಿಸುವ ಮೂಲಕ ಇಬ್ಬರೂ ತಮ್ಮ ಕೈಗಳನ್ನು ಮೇಲೆತ್ತಿದ್ದರು.
ಇರಾನಿಯನ್ ರೆವಲ್ಯೂಷನರಿ ಗಾರ್ಡ್ಸ್ ಗಳ ರಕ್ಷಣೆ ಹೊಂದಿರುವ ಆ ಅತಿಥಿ ಗೃಹದಲ್ಲಿ ಎರಡು ತಿಂಗಳ ಹಿಂದೆಯೆ ಬಾಂಬ್ ಅನ್ನು ಅಡಿಗಿಸಿಡಲಾಗಿತ್ತು. ಮಂಗಳವಾರ ರಾತ್ರಿ ಹನಿಯೆಹ್ ತಮ್ಮ ಕೊಠಡಿಯಲ್ಲಿ ತಂಗಿದ್ದಾಗ ಆ ಬಾಂಬ್ ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ ಹನಿಯೆಹ್ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಅಂಗರಕ್ಷಕರ ಪೈಕಿ ಓರ್ವ ಅಂಗರಕ್ಷಕ ಕೂಡಾ ಮೃತಪಟ್ಟಿದ್ದರು. ಈ ಬಾಂಬ್ ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ, ಇಡೀ ಕಟ್ಟಡವೇ ಒಮ್ಮೆ ಅಲುಗಾಡಿ, ಕಿಟಕಿಗಳು ಪುಡಿಪುಡಿಯಾಗಿದ್ದವು ಹಾಗೂ ಹೊರ ಗೋಡೆಗೆ ಭಾಗಶಃ ಹಾನಿಯಾಗಿತ್ತು. ಇರಾನ್ ರಾಜಧಾನಿ ಟೆಹ್ರಾನ್ ಮೇಲ್ಭಾಗದ ನೆರೆ ಪ್ರದೇಶದಲ್ಲಿರುವ ಈ ಅತಿಥಿ ಗೃಹವು, ನೆಶಾತ್ ಎಂದು ಕರೆಯಲಾಗುವ ಬೃಹತ್ ಕಾಂಪೌಂಡ್ ನ ಭಾಗವಾಗಿದೆ. ಟೆಹ್ರಾನ್ ಗೆ ಭೇಟಿ ನೀಡಿದ್ದಾಗ, ಹಲವಾರು ಬಾರಿ ಹನಿಯೆಹ್ ಅಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸ್ಫೋಟವು ಸ್ಥಳೀಯ ಕಾಲಮಾನ ಸುಮಾರು 2 ಗಂಟೆಗೆ ನಡೆದಿದೆ. ಕೂಡಲೇ ಕಾಂಪೌಂಡ್ ಒಳಗೆ ನಿಯೋಜಿಸಲಾಗಿದ್ದ ತುರ್ತು ವೈದ್ಯಕೀಯ ತಂಡವು ಘಟನಾ ಸ್ಥಳಕ್ಕೆ ಧಾವಿಸಿತಾದರೂ, ಹನಿಯೆಹ್ ಸ್ಥಳದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ಕೊಠಡಿಯಲ್ಲಿ ಉಳಿದುಕೊಂಡಿದ್ದ ಅಂಗರಕ್ಷಕನನ್ನೂ ಈ ಸ್ಫೋಟದಿಂದ ಬದುಕುಳಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಫೆಲೆಸ್ತೀನಿಯನ್ ಇಸ್ಲಾಮಿಕ್ ನಾಯಕ ಝಿಯಾದ್ ಅಲ್-ನಖಾಲಾ ಮೃತ ಹಮಾಸ್ ನಾಯಕ ಹನಿಯೆಹ್ ಕೊಠಡಿಯ ಪಕ್ಕವೇ ಉಳಿದುಕೊಂಡಿದ್ದರು ಎಂದು ವರದಿಯಾಗಿದೆ.
ಅವರ ಕೊಠಡಿಗೆ ಅಂತಹ ಗಂಭೀರ ಹಾನಿಯಾಗಿಲ್ಲದಿರುವುದು ಮೊಸಾದ್ ನ ನಿಖರ ಯೋಜನೆಯನ್ನು ಸೂಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಕ್ಷಣವೇ ಇರಾನ್ ಪ್ರವಾಸದಲ್ಲಿದ್ದ ಹಮಾಸ್ ಉಪ ಕಮಾಂಡರ್ ಖಲೀಲ್ ಅಲ್-ಅಯ್ಯ ಅವರನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದೆ. ಹಮಾಸ್ ಮತ್ತು ಹಿಜ್ಬುಲ್ಲಾದೊಂದಿಗೆ ನಿಕಟವಾಗಿ ಕಾರ್ಯಾಚರಿಸುತ್ತಿರುವ ಇರಾನಿಯನ್ ರೆವಲ್ಯೂಷನರಿ ಗಾರ್ಡ್ಸ್ ನ ಸಾಗರೋತ್ತರ ಪಡೆಯಾದ ಖುದ್ಸ್ ಪಡೆಯ ಜನರಲ್ ಇಸ್ಮಾಯಿಲ್ ಘಾನಿ ಅವರ ಗಮನಕ್ಕೆ ತಕ್ಷಣವೇ ಈ ಮಾಹಿತಿ ನೀಡಲಾಗಿದೆ. ಮಧ್ಯರಾತ್ರಿಯಲ್ಲಿ ಇರಾನ್ ನ ಅತ್ಯುನ್ನತ ನಾಯಕ ಅಯೊತುಲ್ಲಾ ಅಲಿ ಖಮೇನೈ ಅವರನ್ನು ನಿದ್ರೆಯಿಂದ ಎಬ್ಬಿಸಿರುವ ಅವರು, ಕೊನೆಗೂ ಹಮಾಸ್ ನಾಯಕನನ್ನು ಇಸ್ರೇಲ್ ಸೇನಾಪಡೆ ಬಲಿ ಪಡೆದಿದೆ ಎಂಬ ಮಾಹಿತಿಯನ್ನು ಅವರಿಗೆ ತಿಳಿಸಿದ್ದಾರೆ.
ಹತ್ಯೆ ನಡೆದ ನಾಲ್ಕು ಗಂಟೆಯ ನಂತರ ರೆವಲ್ಯೂಷನರಿ ಗಾರ್ಡ್ಸ್ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತು. ಸುಮಾರು ಬೆಳಗ್ಗೆ 7 ಗಂಟೆಯ ವೇಳೆಗೆ ಅಲಿ ಖಮೇನೈ ಅವರು ಇರಾನ್ ನ ಅತ್ಯುನ್ನತ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಗೆ ಕರೆ ನೀಡಿದರು. ಇರಾನ್ ನ ಸಾರ್ವಭೌಮತೆ ಮೇಲೆ ಮತ್ತೊಂದು ನಿರ್ದಯ ದಾಳಿ ನಡೆಸಿರುವ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸುವಂತೆ ಅವರು ಆದೇಶಿಸಿದರು.
ಈ ಕೃತ್ಯದ ಬಗ್ಗೆ ಇಸ್ರೇಲ್ ಯಾವುದೇ ಸಾರ್ವಜನಿಕ ಲಾಭವನ್ನು ಪಡೆಯಲು ಮುಂದಾಗದಿದ್ದರೂ, ಘಟನೆ ನಡೆದ ತಕ್ಷಣವೇ ಇಸ್ರೇಲ್ ಗುಪ್ತಚರ ಇಲಾಖೆಯು ಅಮೆರಿಕಾ ಹಾಗೂ ಅದರ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳಿಗೆ ಈ ಕಾರ್ಯಾಚರಣೆಯ ವಿವರಗಳನ್ನು ಒದಗಿಸಿತು ಎನ್ನಲಾಗಿದೆ. ಆದರೆ, ಈ ಹತ್ಯಾ ಯೋಜನೆಯ ಬಗ್ಗೆ ತನಗೆ ಮುಂಚಿತವಾಗಿಯೇ ತಿಳಿದಿತ್ತು ಎಂಬ ಆರೋಪವನ್ನು ಅಮೆರಿಕ ತಳ್ಳಿ ಹಾಕಿದೆ.
ಈ ಹತ್ಯೆಯು ಇರಾನ್ ನ ರಕ್ಷಣಾ ಲೋಪದ ಕುರಿತು ಗಂಭೀರ ಪ್ರಶ್ನೆಗಳನ್ನೆತ್ತಿದೆ. ಮೊಸಾದ್ ಇಂತಹ ಗುರಿಯಾಗಿಸಿಕೊಂಡ ಹತ್ಯೆ ನಡೆಸುವುದಕ್ಕೆ ಕುಖ್ಯಾತವಾಗಿದ್ದು, ಟೆಹ್ರಾನ್ ನಲ್ಲಿ ಹಮಾಸ್ ನ ಉನ್ನತ ನಾಯಕರ ಚಲನವಲನದ ಮೇಲೆ ನಿಗಾವ ವಹಿಸುವುದು ಮಾತ್ರವಲ್ಲದೆ, ಇರಾನ್ ನ ಉತ್ಕೃಷ್ಟ ಭದ್ರತಾ ಪಡೆಯ ಬಿಗಿ ಭದ್ರತೆಯ ಕಣ್ಣು ತಪ್ಪಿಸಿ ಹನಿಯೆಹ್ ತಂಗಿದ್ದ ಕೋಣೆಯಲ್ಲಿ ಬಾಂಬ್ ಅನ್ನೂ ಇರಿಸಬಲ್ಲ ಮಟ್ಟಕ್ಕೆ ತಲುಪಿದೆ. ಹಮಾಸ್ ಹಾಗೂ ಯಹೂದಿ ದೇಶದ ನಡುವೆ ಕದನ ವಿರಾಮ ಸ್ಥಾಪಿಸಲು ಖತರ್ ಹಾಗೂ ಈಜಿಪ್ಟ್ ದೇಶಗಳು ಮಧ್ಯಸ್ಥಿಕೆ ವಹಿಸಿರುವುದರಿಂದ, ಹನಿಯೆಹ್ ಅವರನ್ನು ಖತರ್ ನ ಹೊರಗೆ ಹತ್ಯೆಗೈಯ್ಯಲು ಇಸ್ರೇಲ್ ಬಯಸಿತ್ತು ಎನ್ನಲಾಗಿದೆ.
ಹನಿಯೆಹ್ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಈಜಿಪ್ಟ್ ವಿದೇಶಾಂಗ ಸಚಿವಾಲಯವು, ಹನಿಯೆಹ್ ಹತ್ಯೆ ಹಾಗೂ ಗಾಝಾದಲ್ಲಿ ಇಸ್ರೇಲ್ ನಿಂದ ಹೆಚ್ಚುತ್ತಿರುವ ಒತ್ತೆಯಾಳು ಪ್ರಕರಣಗಳು, ಶಾಂತಿ ಮಾತುಕತೆಗಳು ಪ್ರಗತಿಯಲ್ಲಿದ್ದರೂ ಇಸ್ರೇಲ್ ಗೆ ಕದನ ವಿರಾಮ ಘೋಷಿಸುವ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದನ್ನು ಸೂಚಿಸುತ್ತಿದೆ ಎಂದು ಆರೋಪಿಸಿದೆ.
ಸೌಜನ್ಯ : nytimes.com