ಅತ್ಯಾಚಾರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ಆರೋಪ: ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮ ಕೈಗೊಂಡ ಹೈಕೋರ್ಟ್
Photo: freepik
ಅಗರ್ತಲ: ಅತ್ಯಾಚಾರ ಸಂತ್ರಸ್ತೆಗೆ ತಮ್ಮ ಚೇಂಬರ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತ್ರಿಪುರಾದ ಧಲಾಯ್ ಜಿಲ್ಲೆಯ ಕಮಲಪುರ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿರುದ್ಧ, ತ್ರಿಪುರಾ ಹೈಕೋರ್ಟ್ ಶಿಸ್ತುಕ್ರಮ ಕೈಗೊಂಡಿದೆ. ಮ್ಯಾಜಿಸ್ಟ್ರೇಟ್ ಬಿಸ್ವತೋಷ್ ಧರ್ ಅವರ ಸೇವೆಯನ್ನು ಕೊನೆಗೊಳಿಸಲಾಗಿದ್ದು, ಅನುಮತಿ ಇಲ್ಲದೇ ಕೇಂದ್ರಸ್ಥಾನವನ್ನು ಬಿಟ್ಟು ಹೋಗುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದಾಗಿ ರಾಜ್ಯ ಕಾನೂನು ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕಾನೂನಾತ್ಮಕವಾಗಿ "ಸೇವೆ ಕೊನೆಗೊಳಿಸುವುದು" ಎಂದರೆ ಅಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸಿ, ಯಾವುದೇ ಕಾರ್ಯನಿಯೋಜಿಸದೇ ಇರುವುದು. ಈ ಪ್ರಕರಣದಲ್ಲಿ ಧರ್ ಅವರನ್ನು ಹೈಕೋರ್ಟ್ ಗೆ ನಿಯೋಜಿಸಲಾಗಿದೆ.
ಅಪರಾಧ ದಂಡಸಂಹಿತೆಯ ಸೆಕ್ಷನ್ 164ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರ ಚೇಂಬರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ನ್ಯಾಯಾಧೀಶರು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎನ್ನುವುದು ಸಂತ್ರಸ್ತೆಯ ದೂರು. ಫೆಬ್ರವರಿ 13ರಂದು ಮನೆಯಲ್ಲೇ 26 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದ ಬಗ್ಗೆ ಹೇಳಿಕೆ ದಾಖಲಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಮಹಿಳೆ ವಿವರಿಸಿದ್ದಾರೆ.
ಯಾವುದೇ ಹೇಳಿಕೆ ದಾಖಲಿಸದೇ ಕೆಲವೇ ನಿಮಿಷಗಳಲ್ಲಿ ಮಹಿಳೆ ಚೇಂಬರ್ ನಿಂದ ತಪ್ಪಿಸಿಕೊಂಡು ಹೊರಬಂದ ಸಂತ್ರಸ್ತೆ ಮಹಿಳೆ, ಇದಕ್ಕೆ ಸಹಕರಿಸದಿದ್ದರೆ ಪ್ರಕರಣ ವ್ಯತಿರಿಕ್ತವಾದೀತು ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಿದ್ದಾರೆ.
" ನ್ಯಾಯಾಧೀಶರ ಮಾತು ಕೇಳಿ ಅಳಲು ಆರಂಭಿಸಿದ ನನ್ನ ಪತ್ನಿಯನ್ನು ಹೊರಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ನ್ಯಾಯಾಧೀಶರ ಚಾರಿತ್ರ್ಯ ಹೀಗಿರುವಾಗ, ಜನ ನ್ಯಾಯ ಪಡೆಯುವುದು ಹೇಗೆ?" ಎಂದು ಸಂತ್ರಸ್ತ ಮಹಿಳೆಯ ಪತಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಂತ್ರಸ್ತೆಯ ಪತಿ ಕಮಲಪುರ ವಕೀಲರ ಸಂಘಕ್ಕೆ ದೂರು ನೀಡಿದ್ದರು. ಆದರೆ ವಕೀಲರ ಸಂಘದ ಕಾರ್ಯದರ್ಶಿ ಉಡಾಫೆಯ ಉತ್ತರ ನೀಡಿ, ಅತ್ಯಾಚಾರ ಪ್ರಕರಣಗಳಲ್ಲಿ ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು ಹಾಗೆ ವರ್ತಿಸಬೇಕಾಗುತ್ತದೆ ಎಂದು ನಂಬಿಸಲು ಯತ್ನಿಸಿದ್ದಾಗಿಯೂ ಆರೋಪಿಸಲಾಗಿದೆ.