ಹರ್ಯಾಣ ವಿಧಾನಸಭಾ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ ವಿರೇಂದ್ರ ಸೆಹ್ವಾಗ್
ಅನಿರುದ್ಧ್ ಚೌಧರಿ , ವಿರೇಂದ್ರ ಸೆಹ್ವಾಗ್ | PC : PTI
ಚಂಡೀಗಢ : ತೋಶಮ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನಿರುದ್ಧ್ ಚೌಧರಿ ಪರ ಪ್ರಚಾರ ನಡೆಸಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಅನಿರುದ್ಧ್ ಚೌಧರಿಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ವಿರೇಂದ್ರ ಸೆಹ್ವಾಗ್, “ನಾನು ಅನಿರುದ್ಧ್ ಚೌಧರಿಯನ್ನು ನನ್ನ ಹಿರಿಯ ಸಹೋದರ ಎಂದು ಪರಿಗಣಿಸುತ್ತೇನೆ. ಬಿಸಿಸಿಐ ಅಧ್ಯಕ್ಷರಾಗಿದ್ದ ಅವರ ತಂದೆ ರಣಬೀರ್ ಸಿಂಗ್ ಮಹೇಂದ್ರ ನನಗೆ ಸಾಕಷ್ಟು ನೆರವು ನೀಡಿದ್ದರು. ಇದು ಅವರ ಪಾಲಿಗೆ ಬಹುಮುಖ್ಯ ದಿನಗಳಾಗಿದ್ದು, ನಾನವರಿಗೆ ನೆರವು ನೀಡಲು ಸಾಧ್ಯನವಾಗಬಹುದು ಎಂದು ಭಾವಿಸಿದ್ದೇನೆ . ಅನಿರುದ್ಧ್ ಚೌಧರಿ ಗೆಲುವು ಸಾಧಿಸಲು ತೋಶಮ್ ಮತದಾರರು ಮತ ನೀಡಬೇಕು” ಎಂದು ಅವರು ಮನವಿ ಮಾಡಿದ್ದಾರೆ.
48 ವರ್ಷದ ಅನಿರುದ್ಧ್ ಚೌಧರಿ ಅವರು ಹರ್ಯಾಣದ ನಾಲ್ಕು ಬಾರಿಯ ಮುಖ್ಯಮಂತ್ರಿ ಬನ್ಸಿಲಾಲ್ ಅವರ ಮೊಮ್ಮಗನಾಗಿದ್ದಾರೆ. ತೋಶಮ್ ವಿಧಾನಸಭಾ ಕ್ಷೇತ್ರ ಬನ್ಸಿಲಾಲ್ ಕುಟುಂಬದ ಭದ್ರಕೋಟೆಯಾಗಿದ್ದು, ಅನಿರುದ್ಧ್ ಚೌಧರಿ ವಿರುದ್ಧ ಅವರ ದೊಡ್ಡಪ್ಪ ಸುರೇಂದರ್ ಸಿಂಗ್ ಅವರ ಮಗಳಾದ ಶ್ರು ತಿ ಸಿಂಗ್ ಸ್ಪರ್ಧಿಸುತ್ತಿರುವುದರಿಂದ ತೋಶಮ್ ವಿಧಾನಸಭಾ ಕ್ಷೇತ್ರದ ಫಲಿತಾಂಶ ಕುತೂಹಲ ಕೆರಳಿಸಿದೆ. ಚುನಾವಣಾ ವಿಶ್ಲೇಷಕರ ಪ್ರಕಾರ, ತೋಶಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ್ ಚೌಧರಿ ಹಾಗೂ ಬಿಜೆಪಿ ಅಭ್ಯರ್ಥಿಯಾದ ಶ್ರುತಿ ಸಿಂಗ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.