ಹರ್ಯಾಣ ವಿಧಾನಸಭಾ ಚುನಾವಣೆ | ರೈತರು ಮಕ್ಕಳ ಮದುವೆ ಮಾಡಲು ಸಾಲದಲ್ಲಿ ಮುಳಗಬೇಕಾದ ಪರಿಸ್ಥಿತಿಯಿದೆ : ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ | PC : PTI
ಬಹದ್ದೂರ್ ಗಢ: “ರೈತರು ತಮ್ಮ ಪುತ್ರರಿಗೆ ವಿವಾಹ ನೆರವೇರಿಸಲು ಬ್ಯಾಂಕ್ ನ ಸಾಲದ ಸುಳಿಗೆ ಸಿಲುಕಿಕೊಳ್ಳುತ್ತಾರೆ. ಆದರೆ, ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ವಿವಾಹಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಬಹುದಾದ ಪರಿಸ್ಥಿತಿಯನ್ನು ನರೇಂದ್ರ ಮೋದಿ ಸೃಷ್ಟಿಸಿದ್ದಾರೆ” ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಇಂದು ಬಹದ್ದೂರ್ ಗಢದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನೀವೇನಾದರೂ ಅಂಬಾನಿ ವಿವಾಹೋತ್ಸವವನ್ನು ನೋಡಿದ್ದೀರಾ? ಅಂಬಾನಿ ತಮ್ಮ ಪುತ್ರನ ವಿವಾಹಕ್ಕಾಗಿ ಕೋಟ್ಯಂತರ ಹಣವನ್ನು ವ್ಯಯಿಸಿದರು. ಅದು ಯಾರ ಹಣ? ಅದು ನಿಮ್ಮ ಹಣ. ನೀವು ನಿಮ್ಮ ಮಕ್ಕಳಿಗೆ ವಿವಾಹ ಮಾಡಲು ಬ್ಯಾಂಕ್ ಸಾಲವನ್ನು ಮಾಡುತ್ತೀರಿ. ಆದರೆ, ನರೇಂದ್ರ ಮೋದಿ ಎಂತಹ ಚೌಕಟ್ಟು ನಿರ್ಮಾಣ ಮಾಡಿದ್ದಾರೆಂದರೆ, ಆಯ್ದ 25 ಮಂದಿ ವಿವಾಹಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಬಹುದು. ಆದರೆ, ರೈತರು ಸಾಲದ ಸುಳಿಯಲ್ಲಿ ಮುಳುಗಿ ಮಾತ್ರ ವಿವಾಹ ನೆರವೇರಿಸಬಹುದು. ಇದು ಸಂವಿಧಾನದ ಮೇಲಿನ ದಾಳಿಯಲ್ಲದೆ ಮತ್ತೇನು?” ಎಂದು ಪ್ರಶ್ನಿಟಸಿದರು.
ಸೋಮವಾರ ಹರ್ಯಾಣದ ಕುರುಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಮತ್ತೊಂದು ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಬಡವರ ಹಣವನ್ನು ಕಸಿದು ಕೋಟ್ಯಧಿಪತಿಗಳಿಗೆ ನೀಡಲು ಮೋದಿ ಮಹಾಭಾರತದಂಥ ಚಕ್ರವ್ಯೂಹವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದರು.