ಹರಿಯಾಣ ವಿಧಾನಸಭಾ ಚುನಾವಣೆ: ವಿನೇಶ್ ಫೋಗಟ್ ವಿರುದ್ಧ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿ ಕ್ಯಾಪ್ಟನ್ ಯೋಗೇಶ್ ಬೈರಾಗಿ ಯಾರು?
ಕ್ಯಾಪ್ಟನ್ ಯೋಗೇಶ್ ಬೈರಾಗಿ , ವಿನೇಶ್ ಫೋಗಟ್ .PC : freepressjournal
ಸೋನಿಪತ್ : ಭಾರತೀಯ ಜನತಾ ಪಕ್ಷವು ಮಂಗಳವಾರ ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಕ್ಯಾಪ್ಟನ್ ಯೋಗೇಶ್ ಬೈರಾಗಿ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಕುಸ್ತಿಪಟು-ರಾಜಕಾರಣಿಯಾಗಿರುವ ಕಾಂಗ್ರೆಸ್ನ ವಿನೇಶ್ ಫೋಗಟ್ ವಿರುದ್ಧ ಕ್ಯಾಪ್ಟನ್ ಯೋಗೀಶ್ ಬೈರಾಗಿ ಕಣಕ್ಕಿಳಿಯಲಿದ್ದಾರೆ.
ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಕಣಕ್ಕಿಳಿಸುವ ಮೂಲಕ ವಿನೇಶ್ ಫೋಗಟ್ ಅವರನ್ನು ಎದುರಿಸಲು ಬಿಜೆಪಿಯು ಗಮನ ಹರಿಸಿದೆ.
ಬಿಜೆಪಿ ಮಂಗಳವಾರ ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಗೆ 21 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯೋಗೀಶ್ ಬೈರಾಗಿ ಅವರ ಹೆಸರಿದೆ.
35 ವರ್ಷದ ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರು ಚೆನ್ನೈ ಪ್ರವಾಹದ ಸಂದರ್ಭದಲ್ಲಿ ನಿರ್ಣಾಯಕ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇತರ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರವು ಪ್ರಾರಂಭಿಸಿದ "ವಂದೇ ಭಾರತ್" ಮಿಷನ್ನಲ್ಲಿ ಅವರು ಭಾಗಿಯಾಗಿದ್ದರು. ಅವೆರಡೂ ರಕ್ಷಣಾ ಕಾರ್ಯಾಚರಣೆಗಳು ಕ್ಯಾಪ್ಟನ್ ಯೋಗೇಶ್ ಬೈರಾಗಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಭಾವದಿಂದ ನಾನು ಬಿಜೆಪಿ ಸೇರಿದೆ ಎಂದು ಕ್ಯಾಪ್ಟನ್ ಯೋಗೇಶ್ ಬೈರಾಗಿ ಹೇಳಿದ್ದಾರೆ.
ಹರಿಯಾಣದ ಜಿಂದ್ ಜಿಲ್ಲೆಯ ಸಫಿಡಾನ್ ಮೂಲದ ಕ್ಯಾಪ್ಟನ್ ಯೋಗೇಶ್ ಬೈರಾಗಿ, ಈಗ ಬಿಜೆಪಿಯ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ್ದಾರೆ.