ಹರ್ಯಾಣ | ನಯಾಬ್ ಸೈನಿ ಸರಕಾರಕ್ಕೆ ನೀಡಿದ ಬೆಂಬಲ ವಾಪಾಸ್ ಪಡೆದ ಮೂವರು ಪಕ್ಷೇತರರು
ಕಾಂಗ್ರೆಸ್ಗೆ ಬೆಂಬಲ, ಬಹುಮತ ಕಳೆದುಕೊಂಡ ಬಿಜೆಪಿ ಸರಕಾರ
ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿ | Photo : IANS
ಚಂಡೀಗಢ: ಲೋಕಸಭಾ ಚುನಾವಣೆಯ ನಡುವೆ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದ್ದು, ರಾಜ್ಯದಲ್ಲಿ ನಯಾಬ್ ಸಿಂಗ್ ಸೈನಿ ನೇತೃತ್ವದ ಸರಕಾರಕ್ಕೆ ಬೆಂಬಲವನ್ನು ಹಿಂಪಡೆದಿರುವುದಾಗಿ ಮೂವರು ಪಕ್ಷೇತರ ಶಾಸಕರು ಮಂಗಳವಾರ ಘೋಷಿಸಿದ್ದಾರೆ.
ಮೂವರು ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಅವರು ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರ ಉಪಸ್ಥಿತಿಯಲ್ಲಿ ರೋಹ್ಟಕ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷೇತರ ಶಾಸಕರು ಈ ಘೋಷಣೆ ಮಾಡಿದ್ದಾರೆ.
"ನಾವು ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಗೆ ನಮ್ಮ ಬೆಂಬಲವನ್ನು ನೀಡುತ್ತಿದ್ದೇವೆ. ರೈತರಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ” ಎಂದು ಶಾಸಕ ಗೊಂಡರ್ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರು, "ಮೂವರು ಪಕ್ಷೇತರ ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಅವರು ಬಿಜೆಪಿ ಸರಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ವಾಪಾಸ್ ಪಡೆದು ಕಾಂಗ್ರೆಸ್ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ" ಎಂದು ಹೇಳಿದರು.
"90 ಸದಸ್ಯ ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ 88 ಮಂದಿ ಶಾಸಕರಿದ್ದಾರೆ. ಅದರಲ್ಲಿ ಬಿಜೆಪಿಯು 40 ಸದಸ್ಯರನ್ನು ಹೊಂದಿದೆ. ಬಿಜೆಪಿ ಸರಕಾರವು ಮೊದಲು JJP ಶಾಸಕರು ಮತ್ತು ಪಕ್ಷೇತರರ ಬೆಂಬಲವನ್ನು ಹೊಂದಿತ್ತು. ಈ ಮೊದಲು JJPಯು ತನ್ನ ಬೆಂಬಲವನ್ನು ಹಿಂಪಡೆದಿತ್ತು. ಈಗ ಪಕ್ಷೇತರರೂ ಬೆಂಬಲ ವಾಪಾಸ್ ಪಡೆದಿದ್ದಾರೆ” ಎಂದು ಉದಯ್ ಭಾನ್ ಹೇಳಿದರು.
"ನಯಾಬ್ ಸಿಂಗ್ ಸೈನಿ ಸರಕಾರಕ್ಕೆ ಈಗ ಬಹುಮತದ ಕೊರತೆಯಿದೆ. ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯಲು ಅವರಿಗೆ ಹಕ್ಕಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು. ವಿಧಾನ ಸಭೆಗೆ ಚುನಾವಣೆ ನಡೆಸಬೇಕು" ಎಂದು ಕಾಂಗ್ರೆಸ್ ಮುಖ್ಯಸ್ಥ ಭಾನ್ ಆಗ್ರಹಿಸಿದ್ದಾರೆ.