ಹರ್ಯಾಣ ವಿಧಾನಸಭೆ | ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ವಿವರಣೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ : ಹರ್ಯಾಣ ವಿಧಾನಸಭೆಯ ‘‘ಅನಿರೀಕ್ಷಿತ’’ ಫಲಿತಾಂಶವನ್ನು ಪಕ್ಷವು ವಿಶ್ಲೇಷಣೆ ನಡೆಸುತ್ತಿದೆ ಮತ್ತು ರಾಜ್ಯದ ವಿವಿಧ ಕ್ಷೇತ್ರಗಳಿಂದ ಸ್ವೀಕರಿಸಲಾಗಿರುವ ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ವಿವರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಹರ್ಯಾಣದಲ್ಲಿ ಅನುಭವಿಸಿದ ಆಘಾತಕಾರಿ ಸೋಲಿಗೆ ಪ್ರಥಮ ಪ್ರತಿಕ್ರಿಯೆ ನೀಡಿದ ಮಾಜಿ ಕಾಂಗ್ರೆಸ್ ಅಧ್ಯಕ್ಷರು, ಪಕ್ಷಕ್ಕೆ ಬೆಂಬಲ ನೀಡಿರುವುದಕ್ಕಾಗಿ ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಕೃತಜ್ಞತೆ ಸಲ್ಲಿಸಿದರು.
‘‘ಜಮ್ಮು ಮತ್ತು ಕಾಶ್ಮೀರದ ಜನರಿಗೆ ನನ್ನ ಹೃದಯ ತುಂಬಿದ ಕೃತಜ್ಞತೆಗಳು. ರಾಜ್ಯದಲಿ ‘ಇಂಡಿಯಾ’ ಮೈತ್ರಿಕೂಟದ ವಿಜಯವು ಸಂವಿಧಾನದ ವಿಜಯವಾಗಿದೆ ಮತ್ತು ಪ್ರಜಾಸತ್ತಾತ್ಮಕ ಆತ್ಮಗೌರವಕ್ಕೆ ಲಭಿಸಿದ ಗೆಲುವಾಗಿದೆ’’ ಎಂದು ಅವರು ಹೇಳಿದರು.
ಬಿಜೆಪಿಯು ಮಂಗಳವಾರ ಹರ್ಯಾಣದಲ್ಲಿ ಸತತ ಮೂರನೇ ಗೆಲುವನ್ನು ದಾಖಲಿಸಿದೆ ಮತ್ತು ಅಧಿಕಾರಕ್ಕೆ ಮರಳುವ ಕಾಂಗ್ರೆಸ್ನ ನಿರೀಕ್ಷೆಯು ಹುಸಿಯಾಗಿದೆ. ಅದೇ ವೇಳೆ, 2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ ಜಯ ಸಾಧಿಸಿದೆ.
ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಪರಿಶೀಲನೆ ನಡೆಸುತ್ತಿದೆ ಎಂದು ರಾಹುಲ್ ಹೇಳಿದರು.
‘‘ಹರ್ಯಾಣದ ಅನಿರೀಕ್ಷಿತ ಫಲಿತಾಂಶವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಹಲವು ವಿಧಾನಸಭಾ ಕ್ಷೇತ್ರಗಳಿಂದ ಬಂದಿರುವ ದೂರುಗಳ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಿದ್ದೇವೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘‘ನಾವು ಹಕ್ಕುಗಳು, ಸಾಮಾಜಿ ಮತ್ತು ಆರ್ಥಿಕ ನ್ಯಾಯ, ಸತ್ಯಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆ ಹಾಗೂ ನಮ್ಮ ಧ್ವನಿಯನ್ನು ಎತ್ತುತ್ತೇವೆ’’ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ರಾಹುಲ್ ಗಾಂಧಿ ಹೇಳಿದರು.
► ಚುನಾವಣಾ ಪ್ರಕ್ರಿಯೆಯನ್ನೇ ಪ್ರಶ್ನಿಸುತ್ತಿದ್ದಾರೆ : ಬಿಜೆಪಿ
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಅನಿರೀಕ್ಷಿತ ಸೋಲಿನ ಬಗ್ಗೆ ಪ್ರತಿಕ್ರಿಯಿಸುವಾಗ, ಚುನಾವಣಾ ಆಯೋಗವನ್ನು ಪ್ರಸ್ತಾಪಿಸಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಿಜೆಪಿಯು ಬುಧವಾರ ಟೀಕಿಸಿದೆ.
ಹರ್ಯಾಣದಲ್ಲಿ ತನ್ನ ಪಕ್ಷ ಸೋತಿರುವುದಕ್ಕೆ ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಶೆಹ್ಝಾದ್ ಪೂನಾವಾಲಾ ಹೇಳಿದರು.
‘‘ರಾಹುಲ್ ಗಾಂಧಿ ಹಕ್ಕುಗಳನ್ನು ಪ್ರತಿಪಾದಿಸುವ ರಾಜಕಾರಣಿಗಳ ಕುಟುಂಬದ ಸದಸ್ಯ ಮತ್ತು ಅವರೊಬ್ಬ ಅಪಕ್ವ ನಾಯಕ. ಸೋಲನುಭವಿಸಿದ ವೇಳೆ ಅವರಲ್ಲಿ ಯಾವುದೇ ಸೌಜನ್ಯವಿರುವುದಿಲ್ಲ’’ ಎಂದು ಪೂನಾವಾಲಾ ಹೇಳಿದರು. ‘‘ಅವರು ಹರ್ಯಾಣದಲ್ಲಿ ಚುನಾವಣೆ ಸೋತಿದ್ದಾರೆ ಎನ್ನುವ ಕಾರಣಕ್ಕಾಗಿ ಚುನಾವಣಾ ಆಯೋಗ ಮತ್ತು ಇಡೀ ಚುನಾವಣಾ ಪ್ರಕ್ರಿಯೆಯ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಅವರಿಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಚುನಾವಣೆ ಗೆದ್ದಾಗ ಸಂವಿಧಾನ ಸರಿಯಾಗಿದೆ. ಹರ್ಯಾಣದಲ್ಲಿ ಅವರು ಸೋಲುವಾಗ ಸಂವಿಧಾನ, ಇವಿಎಮ್, ಚುನಾವಣಾ ಆಯೊಗ ಎಲ್ಲವೂ ಅಪಾಯದಲ್ಲಿದೆ’’ ಎಂದು ಅವರು ಹೇಳಿದರು.
►ದಿಲ್ಲಿಯಲ್ಲಿ ಏಕಾಂಗಿ ಸ್ಪರ್ಧೆ: ಆಪ್
ಈ ನಡುವೆ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದು ಎಂದು ಪಕ್ಷದ ನಾಯಕಿ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.
‘‘ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾವು ಏಂಕಾಗಿಯಾಗಿ ಸ್ಪರ್ಧಿಸುತ್ತೇವೆ. ಒಂದು ಕಡೆ ಅತಿ ಆತ್ಮವಿಶ್ವಾಸದ ಕಾಂಗ್ರೆಸ್ ಮತ್ತು ಇನ್ನೊಂದೆಡೆ ದುರಹಂಕಾರದ ಬಿಜೆಪಿ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಾವು ದಿಲ್ಲಿಯಲ್ಲಿ ಏನು ಮಾಡಿದ್ದೇವೆ ಎನ್ನುವುದರ ಆಧಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ’’ ಎಂದು ಅವರು ನುಡಿದರು.