ಕುಟುಂಬದ ಒತ್ತಡದಿಂದಾಗಿ ದೇಶ ತೊರೆದ ಹಸೀನಾ: ಮಗ ಸಜೀಬ್ ವಾಝೆದ್ ಸ್ಪಷ್ಟನೆ
PC: acebook.com/sajeeb.a.wazed
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ವ್ಯಾಪಕ ವಿದ್ಯಾರ್ಥಿ ಪ್ರತಿಭಟನೆ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿರುವ ಶೇಖ್ ಹಸೀನಾ, ದೇಶವನ್ನು ತೊರೆಯಲು ಬಯಸಿರಲಿಲ್ಲ. ಕುಟುಂಬದ ಒತ್ತಾಯದ ಮೇರೆಗೆ ಇದೀಗ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಅಮೆರಿಕದಲ್ಲಿರುವ ಪುತ್ರ ಮತ್ತು ಮಾಜಿ ಮುಖ್ಯ ಸಲಹೆಗಾರ ಸಜೀಬ್ ವಾಝೆದ್ ಜೋಯ್ ಸ್ಪಷ್ಟಪಡಿಸಿದ್ದಾರೆ.
"ಅವರು ಅಲ್ಲೇ ಉಳಿಯಲು ಬಯಸಿದ್ದರು. ಯಾವುದೇ ಕಾರಣಕ್ಕೆ ದೇಶ ತೊರೆಯುವ ಮನಸ್ಸು ಇರಲಿಲ್ಲ. ಆದರೆ ಸುರಕ್ಷತೆ ದೃಷ್ಟಿಯಿಂದ ದೇಶವನ್ನು ತೊರೆಯುವಂತೆ ನಾವು ಒತ್ತಾಯಿಸಿದೆವು. ಮೊದಲು ಅವರ ದೈಹಿಕ ಸುರಕ್ಷತೆ ಮುಖ್ಯ. ಅದು ನಮ್ಮ ಕಾಳಜಿಯಾಗಿತ್ತು. ಆದ್ದರಿಂದ ದೇಶ ತೊರೆಯುವಂತೆ ಒತ್ತಡ ಹಾಕಿದೆವು" ಎಂದು ಎನ್ ಡಿ ಟಿವಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
"ಇಂದು ಬೆಳಿಗ್ಗೆ ಅವರೊಂದಿಗೆ ಮಾತನಾಡಿದೆ. ನಿಮಗೇ ತಿಳಿದಿರುವಂತೆ ಬಾಂಗ್ಲಾದೇಶದಲ್ಲಿ ಅರಾಜಕ ಪರಿಸ್ಥಿತಿ ಇದೆ. ಅವರು ಉತ್ತಮ ಮನೋಸ್ಥೈರ್ಯ ಹೊಂದಿದ್ದರೂ, ಬಾಂಗ್ಲಾದೇಶವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸುವ ಅವರ ಕನಸು ಛಿದ್ರವಾಗಿರುವುದರಿಂದ ಅವರಿಗೆ ತೀವ್ರ ನಿರಾಸೆಯಾಗಿದೆ. ಇದಕ್ಕಾಗಿ ಅವರು 15 ವರ್ಷದಿಂದ ಶ್ರಮ ವಹಿಸಿದ್ದರು. ಉಗ್ರರಿಂದ ಸುರಕ್ಷಿತವಾಗಿಸಿದ್ದರು. ಆದರೆ ಇದೀಗ ಉಗ್ರರು ಅಧಿಕಾರ ಕಸಿದುಕೊಂಡಿದ್ದಾರೆ" ಎಂದು ಅಭಿಪ್ರಾಯಪಟ್ಟರು.