ದ್ವೇಷಭಾಷಣ ಪ್ರಕರಣ: ತನಿಖಾಧಿಕಾರಿಗಳ ಮುಂದೆ ಹಾಜರಾಗಲು ರಾಮ್ ದೇವ್ ಗೆ ಹೈಕೋರ್ಟ್ ಸೂಚನೆ
ಜೈಪುರ: ದ್ವೇಷಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅಕ್ಟೋಬರ್ 5ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಯೋಗಗುರು ರಾಮ್ ದೇವ್ಗೆ ರಾಜಸ್ಥಾನ ಹೈಕೋರ್ಟ್ ಸೂಚನೆ ನೀಡಿದೆ. ಜತೆಗೆ ಅವರ ಬಂಧನಕ್ಕೆ ಏಪ್ರಿಲ್ 13ರಂದು ವಿಧಿಸಿದ್ದ ತಡೆಯಾಜ್ಞೆಯನ್ನು ಅಕ್ಟೋಬರ್ 16ರವರೆಗೆ ವಿಸ್ತರಿಸಿದೆ.
ವಿಚಾರಣೆಗಾಗಿ ತನಿಖಾಧಿಕಾರಿಗಳು ಕರೆದಾಗಲೆಲ್ಲ ಬಾಬಾ ರಾಮ್ ದೇವ್ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರಿದ್ದ ನ್ಯಾಯಪೀಠ ಸೂಚನೆ ನೀಡಿದೆ. ಮುಂದಿನ ವಿಚಾರಣೆ ನಡೆಯುವ ಅಕ್ಟೋಬರ್ 16ರಂದು ಕೇಸ್ ಡೈರಿಯನ್ನು ನ್ಯಾಯಾಲಯಕ್ಕೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ಸರ್ಕಾರಿ ಅಭಿಯೋಜಕರಿಗೆ ಕೋರ್ಟ್ ಸೂಚಿಸಿದೆ.
ಬಾಬಾ ರಾಮ್ ದೇವ್ ಪರವಾಗಿ ಹಿರಿಯ ವಕೀಲ ಧೀರೇಂದ್ರ ಸಿಂಗ್ ಹಾಜರಾಗಿದ್ದರು. ರಾಜಸ್ಥಾನದ ಬರ್ಮೇರ್ನಲ್ಲಿ ಫೆಬ್ರುವರಿ 2ರಂದು ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದರು ಎನ್ನಲಾದ ಪ್ರಕರಣದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ರಾಮ್ ದೇವ್ ಅರ್ಜಿ ಸಲ್ಲಿಸಿದ್ದರು.
ಮುಸ್ಲಿಮರು "ಭಯೋತ್ಪಾದಕ ಕೃತ್ಯಗಳನ್ನು" ಎಸಗುತ್ತಿದ್ದಾರೆ ಹಾಗೂ ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ ಎಂದು ರಾಮ್ ದೇವ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ ಎಂದು ಆಪಾದಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಫೆಬ್ರುವರಿ 5ರಂದು ಚೋಟಾನ್ ನ ಧನಾವು ನಿವಾಸಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ರಾಮ್ ದೇವ್ ವಿರುದ್ಧ ಬರ್ನೇರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.