ಪ್ರಧಾನಿ ಮೋದಿ ಅಮೆರಿಕ ಭೇಟಿಯನ್ನು ಅಭಿನಂದಿಸಲು ಹಿಂದಿಯಲ್ಲಿ ಟ್ವೀಟ್ ಮಾಡಿದ ಎಚ್.ಡಿ.ಕುಮಾರಸ್ವಾಮಿ
ಪ್ರಾದೇಶಿಕ ಪಕ್ಷಿ ಕಟುಕನ ಗೂಡು ಸೇರಿದೆ, ಕನ್ನಡ ಮರೆತಿರೇ ಎಂದ ಜನರು
ಎಚ್.ಡಿ.ಕುಮಾರಸ್ವಾಮಿ | PC : PTI
ಬೆಂಗಳೂರು : ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯನ್ನು ಅಭಿನಂದಿಸಲು ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿಯ ಅಮೆರಿಕ ಭೇಟಿಯ ಕುರಿತು ತಿಳಿಸಲು ಎಚ್ಡಿಕೆ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಎನ್ಡಿಎ ಮೈತ್ರಿಕೂಟದ ಕೇಂದ್ರ ಸರಕಾರದಲ್ಲಿ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿಯವರು, “ಅಮೆರಿಕಾಗೆ ಮತ್ತೊಂದು ಯಶಸ್ವಿ ಭೇಟಿಯ ನಂತರ ನಾನು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುತ್ತೇನೆ. ಇಷ್ಟು ಕಡಿಮೆ ಅವಧಿಯ ಭೇಟಿಯಲ್ಲಿ ಅವರು ನಿಭಾಯಿಸಿದ ವಿಶಾಲ ವ್ಯಾಪ್ತಿಯ ಸಮಸ್ಯೆಗಳು ನಿಜಕ್ಕೂ ಬೆರಗು ಹುಟ್ಟಿಸುವಂತಿವೆ. ಮೂರು ದಿನಗಳಲ್ಲಿ ಅವರು ಪರಮಾಣು ಶಕ್ತಿ, ಗರ್ಭಕಂಠದ ಕ್ಯಾನ್ಸರ್ ಲಸಿಕೆ, ಅರೆವಾಹಕಗಳು, ಎಐ , ಜೈವಿಕ ತಂತ್ರಜ್ಞಾನ, ಕ್ವಾಂಟಮ್ ತಂತ್ರಜ್ಞಾನ, ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು, ನಮ್ಮ ಸಾಂಸ್ಕೃತಿಕ ಪರಂಪರೆಯ ಮರಳುವಿಕೆ ಮತ್ತು ಇತರ ಹಲವು ವಿಷಯಗಳ ಕುರಿತು ಚರ್ಚಿಸಿದರು. ಇದೆಲ್ಲದರ ಜೊತೆಗೆ ಭೌಗೋಳಿಕ ರಾಜಕೀಯ ವಿಷಯಗಳ ಬಗ್ಗೆಯೂ ಕಾರ್ಯತಂತ್ರದ ಚರ್ಚೆಗಳು ನಡೆದವು. ಭಾರತೀಯ ವಲಸಿಗರೊಂದಿಗೆ ಅವರ ಆತ್ಮೀಯ ಚಿತ್ರಗಳು ಹೃದಯಸ್ಪರ್ಶಿಯಾಗಿದ್ದವು. ಧನ್ಯವಾದಗಳು ಸರ್, #ViksitBharat ಗುರಿಗಳನ್ನು ಸಾಧಿಸಲು ನಿಮ್ಮ ನಿರಂತರ ಶ್ರಮವು ಅತ್ಯಂತ ಸ್ಪೂರ್ತಿದಾಯಕವಾಗಿದೆ” ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕುಮಾರಸ್ವಾಮಿಯವರ ಹಿಂದಿಯಲ್ಲಿನ ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರಹಗಾರ ನೀರಜ್ ಕುಮಾರ್ ದುಬೆ ಎಂಬವರು, ಕುಮಾರಸ್ವಾಮಿಯವರ ಹಿಂದಿ ಭಾಷೆಯ ಈ ಪೋಸ್ಟ್ ಅವರನ್ನು ಹಿಂದಿ ಭಾಷೆಯ ವಿರೋಧಿ ಎಂದು ಕರೆಯುವವರಿಗೆ ತಕ್ಕ ಉತ್ತರವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪುಟ್ನಂಜ ಎಂಬ ಬಳಕೆದಾರರು, ಹಿಂದಿ ಹೇರಿಕೆ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ದು ಚಿಕ್ಕ ಪ್ರಾದೇಶಿಕ ಪಕ್ಷ , ಕನ್ನಡಿಗರಿಗಾಗಿ ಪಕ್ಷ ಉಳಿಸಬೇಕು ಎಂದು ನೀವೇ ಅಲ್ವೇ ಅಷ್ಟುದ್ದ ಹೇಳುತ್ತಿದ್ದುದು ಎಂದು ಸಿಟಿಝನ್ ಆಫ್ ಕನ್ನಡನಾಡು ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರಾದೇಶಿಕ ಪಕ್ಷಿ ಕಟುಕನ ಗೂಡು ಸೇರಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು ನೀವೇನು ಪಾಕಿಸ್ತಾನ ದೇಶದ ಮಂತ್ರಿ ಆಗಿದ್ದೀರಾ??? ಇಂಗ್ಲಿಷ್ ಮತ್ತು ಕನ್ನಡ ಸಾಲದೇ ಭಾರತ ಒಕ್ಕೂಟದ ಮಂತ್ರಿ ಆಗೋಕೆ?? ಎಂದು ಪ್ರಶ್ನಿಸಿದ್ದಾರೆ.
ನಿಮಗೆ ಎರಡು ಸೀಟು ಕೊಟ್ಟದ್ದು ಯಾರು ಎಂದು ನೆನಪಿಸಿಕೊಳ್ಳಿ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.