ಮಲಯಾಳಂ ಸಿನೆಮಾದ ಅತಿರಥ-ಮಹಾರಥರಲ್ಲಿ ನಡುಕ ಹುಟ್ಟಿಸಿರುವ ಹೇಮಾ ಸಮಿತಿ ವರದಿ
Photo: scroll.in
ಹೊಸದಿಲ್ಲಿ : ಮಲಯಾಳಂ ಸಿನೆಮಾ ರಂಗದ ಕುರಿತು ಕೇರಳ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ಕೆ.ಹೇಮಾ ನೇತೃತ್ವದ ಸಮಿತಿಯ ವರದಿಯು ಆ.19ರಂದು ಬಹಿರಂಗಗೊಂಡಿದೆ. ಇದರ ಬೆನ್ನಿಗೇ ಮಲಯಾಳಂ ಸಿನೆಮಾ ರಂಗದ ಅತಿರಥ-ಮಹಾರಥರಲ್ಲಿ ನಡುಕ ಹುಟ್ಟಿದೆ. ಕೆಲವರು ಪ್ರತಿಷ್ಠಿತ ಸಂಘಟನೆಗಳಲ್ಲಿಯ ತಮ್ಮ ಹುದ್ದೆಗಳನ್ನು ತೊರೆದಿದ್ದರೆ, ಕೆಲವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
►ಇಷ್ಟಕ್ಕೂ ಈ ವರದಿಯಲ್ಲಿ ಇರುವುದಾದರೂ ಏನು?
2017ರಲ್ಲಿ ನಟ ದಿಲೀಪ್ ಪ್ರಚೋದನೆಯ ಮೇರೆಗೆ ನಟಿಯೋರ್ವಳ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಬಳಿಕ ‘ವಿಮೆನ್ ಇನ್ ಸಿನೆಮಾ ಕಲೆಕ್ಟಿವ್’ ಗುಂಪಿನ ಒತ್ತಡಕ್ಕೆ ಮಣಿದ ಕೇರಳ ಸರಕಾರವು ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸತ್ಯಶೋಧನಾ ಅಧ್ಯಯನಕ್ಕಾಗಿ ಹೇಮಾ ಸಮಿತಿಯನ್ನು ರಚಿಸಿತ್ತು.
ಖ್ಯಾತ ನಟಿಯರಿಂದ ಹಿಡಿದು ಕಿರಿಯ ಕಲಾವಿದೆಯರವರೆಗೆ ಕನಿಷ್ಠ 80 ಮಹಿಳೆಯರ ಅನಾಮಧೇಯ ಸಾಕ್ಷ್ಯಗಳನ್ನು ದಾಖಲಿಸಿಕೊಂಡಿರುವ ಸಮಿತಿಯು ತನ್ನ 296 ಪುಟಗಳ ಅಧ್ಯಯನವನ್ನು 2019ರಲ್ಲಿಯೇ ಪೂರ್ಣಗೊಳಿಸಿತ್ತಾದರೂ ಅದರ ಪ್ರಕಟಣೆಯ ವಿರುದ್ಧ ಹಲವಾರು ಕಾನೂನು ಸವಾಲುಗಳ ಬಳಿಕ 2024, ಆ.19ರಂದಷ್ಟೇ ಬಿಡುಗಡೆಗೊಂಡಿದೆ.
ನಟಿ ಟಿ.ಶಾರದಾ ಮತ್ತು ಕೇರಳ ಸರಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಕೆ.ಬಿ.ವಲ್ಸಲಾಕುಮಾರಿ ಅವರು ಸದಸ್ಯರಾಗಿದ್ದ ಸಮಿತಿಯು ಮಲಯಾಳಂ ಚಿತ್ರರಂಗದಲ್ಲಿ ಪ್ರಚಲಿತದಲ್ಲಿರುವ ಅತಿರೇಕದ ಲೈಂಗಿಕ ದೌರ್ಜನ್ಯ, ಶೋಚನೀಯ ಕೆಲಸದ ಪರಿಸ್ಥಿತಿಗಳು ಇತ್ಯಾದಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಒಂದೊಂದೇ ಘಟನೆಯೊಂದಿಗೆ ನಿರೂಪಣೆ ಮುಂದುವರಿದಂತೆ ಹಲವಾರು ಐಕಾನ್ಗಳು ಕುಸಿಯತೊಡಗಿದವು ಎಂದು ವಲ್ಸಲಾಕುಮಾರಿ ತನ್ನ ಕಮೆಂಟ್ಗಳಲ್ಲಿ ಹೇಳಿದ್ದಾರೆ.
ವರದಿಯು ಯಾವುದೇ ‘ರಣಹದ್ದನ್ನು’ ಹೆಸರಿಸದಿದ್ದರೂ ಅದರ ಬಿಡುಗಡೆಯು ರಂಜಿತ್, ಸಿದ್ದಿಕ್, ಬಾಬುರಾಜ್ ಮತ್ತು ಸಾಜಿನ್ ಬಾಬು ಸೇರಿದಂತೆ ಚಿತ್ರನಿರ್ಮಾಪಕರು ಮತ್ತು ನಟರ ವಿರುದ್ಧ ಲೈಂಗಿಕ ದುರ್ವರ್ತನೆಗಳ ಆರೋಪಗಳಿಗೆ ಕಾರಣವಾಗಿದೆ. ರವಿವಾರ ಪಿಣರಾಯಿ ವಿಜಯನ್ ಸರಕಾರವು ಆರೋಪಗಳ ತನಿಖೆಗಾಗಿ ಏಳು ಹಿರಿಯ ಪೋಲಿಸ್ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.
ವರದಿ ಬಿಡುಗಡೆ ಬಳಿಕ ತ್ವರಿತ ಬೆಳವಣಿಗೆಗಳು ನಡೆದಿದ್ದು, ಬಂಗಾಳಿ ನಟಿಯೋರ್ವರ ದೂರಿನ ಮೇರೆಗೆ ಕೇರಳ ಪೋಲಿಸರು ಸೋಮವಾರ ನಿರ್ಮಾಪಕ ರಂಜಿತ್ ವಿರುದ್ಧ ಜಾಮೀನುರಹಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಟಿ 2009ರಲ್ಲಿ ಚಿತ್ರವೊಂದರ ನಿರ್ಮಾಣದ ಸಂದರ್ಭದಲ್ಲಿ ರಂಜಿತರಿಂದ ಲೈಂಗಿಕ ದುರ್ವರ್ತನೆಯನ್ನು ಆರೋಪಿಸಿದ್ದಾರೆ.
ಹೇಮಾ ಸಮಿತಿಯು ಕಳಪೆ ಕೆಲಸದ ಪರಿಸ್ಥಿತಿಗಳಿಂದ ಹಿಡಿದು ಲೈಂಗಿಕ ದೌರ್ಜನ್ಯದ ನಿರಂತರ ಬೆದರಿಕೆವರೆಗಿನ ಹಲವಾರು ಸಮಸ್ಯೆಗಳನ್ನು ಪರಿಶೀಲಿಸಿದೆ.
►ಮಾತನಾಡಲು ಹಿಂಜರಿಕೆ
ಸಮಿತಿಯು ಎದುರಿಸಿದ್ದ ಮೊದಲ ಅಡಚಣೆಗಳಲ್ಲಿ ‘ಮೌನ’ವು ಒಂದಾಗಿತ್ತು. ತಮ್ಮ ಯೂನಿಯನ್ಗಳಿಂದ ಪ್ರತೀಕಾರ ಅಥವಾ ದೂಷಣೆಗಳಿಗೆ ಹೆದರಿ ಅನೇಕ ಮಹಿಳೆಯರು ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಎನ್ನುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು.
►ಮೂಲಭೂತ ಮಾನವ ಹಕ್ಕುಗಳ ನಿರಾಕರಣೆ
ಚಿತ್ರೀಕರಣ ಸ್ಥಳಗಳಲ್ಲಿ ಮಹಿಳೆಯರಿಗೆ ಶೌಚಾಲಯ ಮತ್ತು ಉಡುಪುಗಳನ್ನು ಬದಲಿಸಲು ಕೋಣೆಯಂತಹ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಅಧ್ಯಯನ ವರದಿಯು ಎತ್ತಿ ತೋರಿಸಿದೆ. ಮೂತ್ರ ವಿಸರ್ಜನೆಯನ್ನು ನಿವಾರಿಸಲು ಮಹಿಳೆಯರು ಸಾಧ್ಯವಿದ್ದಷ್ಟು ಸಮಯ ನೀರನ್ನು ಕುಡಿಯುವುದನ್ನು ತಪ್ಪಿಸಿಕೊಳ್ಳುತ್ತಾರೆ ಮತ್ತು ಇದು ಅವರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಸೂಕ್ತ ಸ್ಥಳವನ್ನು ತಲುಪಲು ಹತ್ತು ನಿಮಿಷಗಳು ಬೇಕಾಗುತ್ತಿದ್ದವು, ಹೀಗಾಗಿ ತಮಗೆ ಶೌಚಾಲಯಕ್ಕೆ ಹೋಗಲು ಅನುಮತಿ ನೀಡುತ್ತಿರಲಿಲ್ಲ ಎಂದು ಕಿರಿಯ ಕಲಾವಿದೆಯೋರ್ವಳು ಸಮಿತಿಗೆ ತಿಳಿಸಿದ್ದಾಳೆ.
►ಲೈಂಗಿಕ ಕಿರುಕುಳ ಪ್ರಮುಖ ಸಮಸ್ಯೆ
ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಕುರಿತಂತೆ ವರದಿಯು ಸುದೀರ್ಘ ಅಧ್ಯಾಯವನ್ನು ಒಳಗೊಂಡಿದೆ. ಸಿನಿಮಾ ಉದ್ಯಮದ ಕುಖ್ಯಾತಿಗೆ ಎಲ್ಲ ಪುರುಷರನ್ನೂ ಬೆಟ್ಟುಮಾಡುವಂತಿಲ್ಲ ಎಂದು ವರದಿಯು ಹೇಳಿದೆಯಾದರೂ ಅದು ಲೈಂಗಿಕ ಶೋಷಣೆಯ ಭಯಾನಕ ನಿದರ್ಶನಗಳನ್ನು ಎತ್ತಿ ತೋರಿಸಿದೆ. ಚಲನ ಚಿತ್ರೋದ್ಯಮವನ್ನು ಹೊಸದಾಗಿ ಪ್ರವೇಶಿಸುವ ಮಹಿಳೆಗೆ ಇಲ್ಲಿ ಉಳಿಯಬೇಕೆಂದರೆ ‘ಹೊಂದಾಣಿಕೆಗಳನ್ನು’ ಮತ್ತು ‘ರಾಜಿ’ಯನ್ನು ಮಾಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ ಎಂದು ವರದಿಯು ತಿಳಿಸಿದೆ.
ಸೌಜನ್ಯ : scroll.in