ಮತ್ತೆ ಜಾರ್ಖಂಡ್ ಮುಖ್ಯಮಂತ್ರಿ ಆಗಲಿರುವ ಹೇಮಂತ್ ಸೊರೇನ್?
ರಾಜೀನಾಮೆ ನೀಡಲಿರುವ ಚಂಪೈ ಸೊರೇನ್ : ವರದಿ
ಹೇಮಂತ್ ಸೊರೇನ್ | PC : PTI
ರಾಂಚಿ: ಹೇಮಂತ್ ಸೊರೇನ್ ಅವರನ್ನು ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ನೇಮಿಸಲು ಇಂಡಿಯಾ ಮೈತ್ರಿಕೂಟ ಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ. ರಾಂಚಿಯ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಇಂಡಿಯಾ ಮೈತ್ರಿಕೂಟ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಚಂಪಾಯಿ ಸೊರೇನ್ ಅವರನ್ನು ಬದಲಿಸುವ ಕುರಿತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಈಗಾಗಲೇ ಒಮ್ಮತಕ್ಕೆ ತಲುಪಿವೆ ಎಂದು ಹೇಳಲಾಗಿದೆ. ಚಂಪೈ ಸೊರೇನ್ ಅವರು ಇಂದು ಬುಧವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ತಮ್ಮ ರಾಜೀನಾಮೆ ಸಲ್ಲಿಸಲಿದ್ದು, ಹೇಮಂತ್ ಸೊರೇನ್ ಮೂರನೆಯ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
ಭೂಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ, ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿದ್ದ ಹೇಮಂತ್ ಸೊರೇನ್, ಜೂನ್ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಜನವರಿ 31ರಂದು ತಮ್ಮನ್ನು ಜಾರಿ ನಿರ್ದೇಶನಾಲಯ(ಈಡಿ) ಬಂಧಿಸುವುದಕ್ಕೂ ಮುನ್ನ, ಹೇಮಂತ್ ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಹೇಮಂತ್ ಸೊರೇನ್ ಬಂಧನದ ನಂತರ, ಫೆಬ್ರವರಿ 2ರಂದು ಚಂಪೈ ಸೊರೇನ್ ಜಾರ್ಖಂಡ್ ರಾಜ್ಯದ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಿಶ್ಕಾಂತ್ ದುಬೆ, "ಕುಟುಂಬ ಕೇಂದ್ರಿತ ಪಕ್ಷದಲ್ಲಿ ಕುಟುಂಬದ ಹೊರಗಿನವರಿಗೆ ಭವಿಷ್ಯವಿಲ್ಲ. ಚಂಪಾಯಿ ಸೊರೇನ್ ಯುಗ ಮುಗಿಯಿತು" ಎಂದು ವ್ಯಂಗ್ಯವಾಡಿದ್ದಾರೆ.