ಛಲದಿಂದ ಸವಾಲುಗಳನ್ನು ಗೆದ್ದು ಜೀವನದಲ್ಲಿ ಯಶಸ್ಸು ಸಾಧಿಸಿದ ಕೋರ್ಟ್ ವಕೀಲೆ ಪ್ರಿಯದರ್ಶಿನಿ ರಾಹುಲ್
ವರದಕ್ಷಿಣೆ ಬೇಡಿಕೆಯಿಂದಾಗಿ ಮದುವೆ ನಿಂತು ಹೋದ ನಂತರ ಛಲ ಬಿಡದೆ ಕಾನೂನು ಹೋರಾಟ ನಡೆಸಿದ ಹೆಣ್ಣು ಮಗಳ ಸ್ಪೂರ್ತಿದಾಯಕ ಕಥೆ
Photo: indianexpress
ಹೊಸದಿಲ್ಲಿ: ವರದಕ್ಷಿಣೆ ಪ್ರಕರಣದಲ್ಲಿ ಸಂತ್ರಸ್ತೆಯಾಗಿ ಕೆಲ ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ಹೆಣ್ಣು ಮಗಳೊಬ್ಬಳು ಇದೀಗ ಸುಪ್ರೀಂ ಕೋರ್ಟ್ ವಕೀಲೆಯಾಗಿ ತನ್ನಂತೆ ನೊಂದ ಯುವತಿಯರ ಪಾಲಿಗೆ ಆಶಾಕಿರಣವಾಗಿದ್ದಾರೆ. ಈಕೆಯೇ ಪ್ರಿಯದರ್ಶಿನಿ ರಾಹುಲ್. ಮೂವತ್ತೇಳು ವರ್ಷದ ಪ್ರಿಯದರ್ಶಿನಿ ರಾಹುಲ್ 24 ವರ್ಷದವರಿರುವಾಗ ಆಕೆಗೆ ನಿಶ್ಚಯವಾಗಿದ್ದ ವಿವಾಹವು ಗಂಡಿನ ಕಡೆಯವರ ವರದಕ್ಷಿಣೆ ಬೇಡಿಕೆಯಿಂದಾಗಿ ನಿಂತು ಹೋಗಿತ್ತು.
ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದ ತಂದೆ ಹಾಗೂ ಗೃಹಿಣಿಯಾಗಿದ್ದ ಆಕೆಯ ತಾಯಿಗೆ ವರನ ಕಡೆಯವರ ಅತಿಯಾದ ವರದಕ್ಷಿಣೆ ಬೇಡಿಕೆ ಈಡೇರಿಸಲಾಗದೆ ಮದುವೆ ನಿಂತು ಹೋಗಿತ್ತು. ಘಟನೆಯಿಂದ ಕುಟುಂಬವು ಸಮಾಜದ ಮುಂದೆ ತಲೆ ತಗ್ಗಿಸುವಂತಾಗಿತ್ತು.
ತಾವು ಮಾಡದ ತಪ್ಪಿಗೆ ತನ್ನ ಕುಟುಂಬವೇಕೆ ನೊಂದುಕೊಳ್ಳಬೇಕೆಂದು ಹಾಗೂ ತನಗೆ ಮೌನವಾಗಿರುವಂತೆ ಎಲ್ಲರು ಹೇಳುತ್ತಿರುವುದು ಪ್ರಿಯದರ್ಶಿನಿ ಚಿಂತಿಸುವಂತೆ ಮಾಡಿತ್ತು. ಈ ವಿಷಯ ಮರೆಯುವ ಬದಲು ಆಕೆ ಕಾನೂನು ಹೋರಾಟಕ್ಕೆ ಮುಂದಾದರು.
ನ್ಯಾಯ ಕೋರಿ ಆಕೆ ಮದ್ರಾಸ್ ಹೈಕೋರ್ಟ್ ಕದ ತಟ್ಟಿದರು. ನಂತರ ಅವರು ಕಾನೂನು ವಿದ್ಯಾಭ್ಯಾಸ ಮುಂದುವರಿಸಿದ್ದರು. ಅವರ ಕಾನೂನು ಹೋರಾಟ ಸುಮಾರು 14 ವರ್ಷಗಳ ಕಾಲ ಮುಂದುವರಿದು ಕಳೆದ ವರ್ಷ ಇತ್ಯರ್ಥಗೊಂಡಿತ್ತು. ಈ ಸಂದರ್ಭ ಆಕೆಗೆ ದೊರೆತ ರೂ 11 ಲಕ್ಷ ಪರಿಹಾರವನ್ನು ಸುಪ್ರೀಂ ಕೋರ್ಟ್ ವಕೀಲರ ಕಲ್ಯಾಣ ನಿಧಿಗೆ ಕೊಡುಗೆ ನೀಡಲು ಅವರು ನಿರ್ಧರಿಸಿ ಈ ಮೂಲಕ ತಮ್ಮಂತೆ ನೊಂದವರಿಗೆ ಕಾನೂನು ಸಹಾಯ ದೊರೆಯಲು ಅನುವು ಮಾಡಿಕೊಟ್ಟಿದ್ದಾರೆ.
ಸದ್ಯ ದಿಲ್ಲಿಯಲ್ಲಿ ವಾಸವಾಗಿರುವ ಪ್ರಿಯದರ್ಶಿನಿ ಆಗಾಗ ಪುಣೆಗೆ ಪ್ರಯಾಣಿಸುತ್ತಾರೆ ಹಾಗೂ ಅಲ್ಲಿ ಅಗತ್ಯವಿರುವವರಿಗೆ ಕಾನೂನು ಸಹಾಯ ಒದಗಿಸುತ್ತಾರೆ. 2015ರಲ್ಲಿ ಅವರು ಪುಣೆಯ ಸಿಂಬಿಯೋಸಿಸ್ ಲಾ ಸ್ಕೂಲ್ನ ಪದವೀಧರರಾಗಿರುವ ವಕೀಲರೊಬ್ಬರನ್ನು ವಿವಾಹವಾದರು ಹಾಗೂ ಅವರ ಬೆಂಬಲದೊಂದಿಗೆ ತಮ್ಮ ಅಭಿಯಾನ ಮುಂದುವರಿಸಿದ್ದಾರೆ.
2019ರಲ್ಲಿ ಅವರು ಸಂಸದ್ ರತ್ನ ಪ್ರಶಸ್ತಿ ಸಮಿತಿಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದರು. ವಿವಿಧ ಪಕ್ಷಗಳಲ್ಲಿ ರಾಜಕೀಯ ಜೀವನ ಆರಂಭಿಸಲು ಬಯಸುವವರಿಗೆ ತರಬೇತಿ ನೀಡುವ ನೆಕ್ಸ್ಟ್ ಜೆನ್ ಪೊಲಿಟಿಕಲ್ ಲೀಡರ್ಸ್ ಎಂಬ ಎನ್ಜಿಒ ಅನ್ನು ಆರಂಭಿಸಿ ಅವರು ನಡೆಸುತ್ತಿದ್ದಾರೆ.
ಸೌಜನ್ಯ : indianexpress.com